SUDDIKSHANA KANNADA NEWS/ DAVANAGERE/ DATE:26-04-2023
ದಾವಣಗೆರೆ (DAVANAGERE): ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ನಟ, ನಿರ್ದೇಶಕ ಕಿಚ್ಚ ಸುದೀಪ್ (KICHHA SUDEEP) ಬಿರುಸಿನ ಪ್ರಚಾರ ನಡೆಸಿದರು. ಮೊಳಕಾಲ್ಮೂರಿನಿಂದ ಜಗಳೂರಿಗೆ ಆಗಮಿಸಿದ ಸುದೀಪ್ (SUDEEP) ಬಿಜೆಪಿ(BJP) ಅಭ್ಯರ್ಥಿ ಎಸ್. ವಿ. ರಾಮಚಂದ್ರಪ್ಪರ ಪರ ಪ್ರಚಾರ ನಡೆಸಿದರು. ಈ ವೇಳೆ ಕಿಚ್ಚನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಹಸ್ತಲಾಘವಕ್ಕೆ ತಾ ಮುಂದು ನಾ ಮುಂದು ಅಂತಾ ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.
ದಾವಣಗೆರೆ (DAVANAGERE) ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಿವೆ. ಕಳೆದ ಬಾರಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯ್ನಾಗಿ ಮಾಡುತ್ತೇವೆ ಎಂಬ ಭರವಸೆ ಕೊಟ್ಟು ಜಿಲ್ಲೆಯಾದ್ಯಂತ ಪ್ರಚಾರ ಮಾಡಿದ್ದ ಬಿಜೆಪಿ ವಾಲ್ಮೀಕಿ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದ್ರೆ, ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಆದ್ರೆ, ಈ ಬಾರಿ ಬೇರೆಯದ್ದೇ ರಣತಂತ್ರ ರೂಪಿಸಿರುವ ಬಿಜೆಪಿಯು ವಾಲ್ಮೀಕಿ ಸಮಾಜವು ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆಯೋ ಅಲ್ಲಿ ಕಿಚ್ಚ ಸುದೀಪ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
ಜಗಳೂರು ಪಟ್ಟಣಕ್ಕೆ ಸುದೀಪ್ (SUDEEP) ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು
ಆಗಮಿಸಿದ್ದರು. ರೋಡ್ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಸುದೀಪ್, ಎಸ್. ವಿ. ರಾಮಚಂದ್ರಪ್ಪ ಶಾಸಕರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಜನಪರವಾಗಿ ಕೆಲಸ ಮಾಡಿದ್ದಾರೆ. ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗುವ ನಾಯಕ. ಇಂಥವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ರೋಡ್ ಶೋ ಮೂಲಕ ಮತಯಾಚಿಸಿದ ಸುದೀಪ್ ಅವರು ಬಿಸಿಲಿನ ಝಳಕ್ಕೆ ಆಯಾಸವಾದಂತೆ ಕಂಡು ಬಂತು. ಜೊತೆಗೆ ಮೆರವಣಿಗೆ ಬರುವ ವೇಳೆಯಲ್ಲಿ ಬಾಟಲಿ ನೀರು ಕುಡಿದರು. ರಾಮಚಂದ್ರಪ್ಪರ ಜತೆ ರೋಡ್ ಶೋ ನಡೆಸಿದ ಸುದೀಪ್
ಅವರು ಬಳಿಕ ಮಾಯಕೊಂಡ ಕ್ಷೇತ್ರಕ್ಕೆ ಆಗಮಿಸಿದರು.
ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಸುದೀಪ್ ಮತಯಾಚಿಸಿದರು. ತ್ಯಾವಣಿಗೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಸುದೀಪ್, ಬಸವರಾಜ್ ನಾಯ್ಕ್ ಅವರನ್ನು ಗೆಲ್ಲಿಸುವಂತೆ ಕೈಮುಗಿದು ಪ್ರಾರ್ಥಿಸಿದರು. ಈ ಕ್ಷೇತ್ರದಲ್ಲಿಯೂ ವಾಲ್ಮೀಕಿ ಸಮುದಾಯದ ಮತಗಳಿದ್ದು, ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ಪ್ರಚಾರ ನಡೆಸಿದರು. ವಾಲ್ಮೀಕಿ ಸಮುದಾಯದವರು ಹೆಚ್ಚಿರುವ ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಿಂದ ರೋಡ್ ಶೋ ಆಯೋಜಿಸಲಾಗಿತ್ತು. ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ. ಜಿ. ಅಜಯ್ ಕುಮಾರ್ ಪರ ಸುದೀಪ್ ಪ್ರಚಾರ ಕೈಗೊಂಡರು.
ಜಗಳೂರು, ಮಾಯಕೊಂಡ, ದಾವಣಗೆರೆ, ಉತ್ತರ ಹಾಗೂ ದಕ್ಷಿಣದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಇವೆ. ಈ ಮತಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಥವಾ ಬೇರೆ ಪಕ್ಷಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಸುದೀಪ್ ಅವರನ್ನು ಕರೆಯಿಸಿ ಪ್ರಚಾರ ನಡೆಸಲಾಗಿದೆ. ಸುದೀಪ್ ಅವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕಾಗಿ ಒಂದೇ ದಿನ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಸುದೀಪ್ ಅವರ ಈ ಪ್ರಚಾರ ವರ್ಕೌಟ್ ಆಗುತ್ತೋ ಅಥವಾ ಇಲ್ಲವೋ ಎಂಬುದು ಫಲಿತಾಂಶದ ದಿನ ಗೊತ್ತಾಗಲಿದೆ.