ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿ ವಿಮಾನ ನಿಲ್ದಾಣದ ಬಳಿ ಭಾನುವಾರ ಮುಂಜಾನೆ ಅತಿವೇಗವಾಗಿ ಬಂದ ಮಿನಿ ಕೂಪರ್ ಕಾರು ಸ್ಕೂಟರ್‌ಗೆ ಡಿಕ್ಕಿಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ವಯನಾಡಿನ ದೇವಿಕಾ, ಪಾಲಕ್ಕಾಡ್‌ನ ಗೋಪಿಕಾ ಹಾಗೂ ಕರ್ನಾಟಕ ಮೂಲದ ಇಜಾಸ್ ಮೃತ ದುರ್ದೈವಿಗಳಾಗಿದ್ದು, ಇವರು ತ್ರಿಕ್ಕಾಕರದಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಚಹಾ ಕುಡಿದು ವಾಪಸಾಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
ಕಾರು ಚಾಲನೆ ಮಾಡುತ್ತಿದ್ದ 19 ವರ್ಷದ ಸುಹೈಲ್ ಸಜೀವ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತದ ನಂತರ ಸ್ಥಳದಲ್ಲಿದ್ದ ಸ್ಥಳೀಯರೊಂದಿಗೆ ಮಾತನಾಡುವಾಗ “ನನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಅಹಂಕಾರದಿಂದ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿತದ ಸಂಶಯ: ಆರೋಪಿ ಚಾಲಕ ಮದ್ಯಪಾನ ಮಾಡಿದ್ದನೆಂಬ ಶಂಕೆ ವ್ಯಕ್ತವಾಗಿದ್ದು, ರಕ್ತದ ಮಾದರಿ ಹಾಗೂ ಫೋರೆನ್ಸಿಕ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಬಿಎನ್ಎಸ್ ಕಾಯ್ದೆ ದಾಖಲು: ಅಪಘಾತ ಎಸಗಿದ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ನರಹತ್ಯೆ ಹಾಗೂ ಇತರೆ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಹಲ್ಲೆ: ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದ ಸಂದರ್ಭದಲ್ಲಿ ಆಕ್ರೋಶಗೊಂಡ ಮೃತರ ಸ್ನೇಹಿತರು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತ ಗಸ್ತನ್ನು ಮತ್ತಷ್ಟು ಕಟ್ಟುನಿಟ್ಟಗೊಳಿಸಲು ಹಾಗೂ ಕಠಿಣ ತಡೆ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.





Leave a comment