ತಿರುವನಂತಪುರಂ: ಕೇರಳದ ವಿದ್ಯಾರ್ಥಿ ರಾಜಕಾರಣದಲ್ಲಿ ಐತಿಹಾಸಿಕ ಬದಲಾವಣೆಯೊಂದು ಸಂಭವಿಸಿದೆ. ಎಡಪಂಥೀಯರ (ಸಿಪಿಐ-ಎಂ ಬೆಂಬಲಿತ SFI) ದಶಕಗಳ ಕಾಲದ ಭದ್ರಕೋಟೆಯಾಗಿದ್ದ ಎರ್ನಾಕುಲಂ ಜಿಲ್ಲೆಯ ತ್ರಿಪುಣಿತ್ತುರ ಸರ್ಕಾರಿ ಸಂಸ್ಕೃತ ಕಾಲೇಜಿನ ಯೂನಿಯನ್ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 12 ಪ್ರಮುಖ ಸ್ಥಾನಗಳಲ್ಲಿಯೂ ಎಬಿವಿಪಿ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಎಸ್‌ಎಫ್‌ಐ ಹಿಡಿತವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಿದ್ದಾರೆ.
ಇತ್ತೀಚೆಗೆ ನಡೆದ ತ್ರಿಪುಣಿತ್ತುರ ನಗರಸಭೆ ಚುನಾವಣೆಯಲ್ಲಿ 45 ವರ್ಷಗಳ ಎಡರಂಗದ ಆಡಳಿತಕ್ಕೆ ತಡೆ ಒಡ್ಡಿ ಬಿಜೆಪಿ ಅಧಿಕಾರಕ್ಕೇರಿತ್ತು. ಇದೀಗ ಅದೇ ಮಾದರಿಯಲ್ಲಿ ಕಾಲೇಜು ಕ್ಯಾಂಪಸ್‌ನಲ್ಲೂ ಎಬಿವಿಪಿ ಐತಿಹಾಸಿಕ ಜಯ ದಾಖಲಿಸಿದೆ.
ಗೆಲುವು ಸಾಧಿಸಿದ ಪ್ರಮುಖ ಅಭ್ಯರ್ಥಿಗಳು:
ಅಧ್ಯಕ್ಷರು : ಸ್ನಿಗ್ಧಾ ಎಂ ಹರಿ
ಉಪಾಧ್ಯಕ್ಷರು : ಆದಿತ್ಯ ಟಿ ಎ
ಪ್ರಧಾನ ಕಾರ್ಯದರ್ಶಿ : ವಿಘ್ನೇಶ್ ಭಟ್
ಮ್ಯಾಗಜೀನ್ ಎಡಿಟರ್ : ವಿಘ್ನೇಶ್ ಡಿ
ಆರ್ಟ್ಸ್ ಕ್ಲಬ್ ಕಾರ್ಯದರ್ಶಿ : ಅಂಜಲಿ ಟಿ
ಯೂನಿವರ್ಸಿಟಿ ಯೂನಿಯನ್ ಕೌನ್ಸಿಲರ್ : ನಿವೇದ್ಯಾ ಕೆ ಎನ್
SFI ವಿದ್ಯಾರ್ಥಿ ವಿರೋಧಿ ನೀತಿಗಳು, ಸಂಸ್ಕೃತ ಭಾಷಾ ಪ್ರಚಾರ ನಿರ್ಲಕ್ಷ್ಯ ಹಾಗೂ ನಿಧಿ ದುರುಪಯೋಗದ ವಿರುದ್ಧ ವಿದ್ಯಾರ್ಥಿಗಳು ಈ ಜನಾದೇಶ ನೀಡಿದ್ದಾರೆ ಎಂದು ಎಬಿವಿಪಿ ಹೇಳಿದೆ.
4 ದಶಕಗಳ ಆಡಳಿತಕ್ಕೆ ಮುಕ್ತಾಯ: ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಈ ಸಂಸ್ಕೃತ ಕಾಲೇಜಿನ ಯೂನಿಯನ್‌ನಲ್ಲಿ ಎಸ್‌ಎಫ್‌ಐ ಏಕಚಕ್ರಾಧಿಪತ್ಯ ಸಾಧಿಸಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಎಬಿವಿಪಿಗೆ ಬೆಂಬಲ ಸೂಚಿಸುವ ಮೂಲಕ ಎಡಪಂಥೀಯರ ಸತತ ಆಡಳಿತಕ್ಕೆ ಪೂರ್ಣವಿರಾಮ ಹಾಕಿದ್ದಾರೆ.
ನಗರಸಭೆಯಲ್ಲೂ ಬಿಜೆಪಿಯ ಮೈಲಿಗಲ್ಲು: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತ್ರಿಪುಣಿತ್ತುರ ಪುರಸಭೆಯನ್ನು ವಶಪಡಿಸಿಕೊಳ್ಳುವ ಮೂಲಕ ಬಿಜೆಪಿ ದಾಖಲೆ ಬರೆದಿತ್ತು. ಅದೇ ರಾಜಕೀಯ ಬದಲಾವಣೆಯ ಗಾಳಿ ಇದೀಗ ಪ್ರಸಿದ್ಧ ಸಂಸ್ಕೃತ ಕಾಲೇಜಿನ ಕ್ಯಾಂಪಸ್‌ಗೂ ವ್ಯಾಪಿಸಿದೆ.
ವಿದ್ಯಾರ್ಥಿ ಪರಿಷತ್ ಆರೋಪ: ಎಸ್‌ಎಫ್‌ಐ ನೇತೃತ್ವದ ಕಾಲೇಜು ಯೂನಿಯನ್‌ಗಳು ಸಂಸ್ಕೃತ ಭಾಷೆಯ ಪ್ರಚಾರ ಹಾಗೂ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಜೊತೆಗೆ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ನಿಧಿಯ ದುರುಪಯೋಗ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೊರತೆಯ ವಿರುದ್ಧ ವಿದ್ಯಾರ್ಥಿಗಳು ಈ ರೀತಿಯ ಭಾರಿ ಜನಾದೇಶ ನೀಡಿದ್ದಾರೆ ಎಂದು ಎಬಿವಿಪಿ ಪ್ರತಿನಿಧಿಗಳು ತಿಳಿಸಿದ್ದಾರೆ.





Leave a comment