ಕೌಶಂಬಿ (ಉತ್ತರ ಪ್ರದೇಶ): ಪತ್ನಿ ಜಗಳವಾಡಿಕೊಂಡು ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರಿಂದ ತೀವ್ರ ಮನನೊಂದ 26 ವರ್ಷದ ವ್ಯಕ್ತಿಯೊಬ್ಬ, ಫೇಸ್‌ಬುಕ್‌ನಲ್ಲಿ ಲೈವ್ (Facebook Live) ಬಂದು ಡೆತ್‌ನೋಟ್ ಪ್ರದರ್ಶಿಸಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ದಿಗಿಲುಗೊಳಿಸುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಸ್ಥಳದಲ್ಲಿದ್ದ ಮೀನುಗಾರರ ಸಮಯಪ್ರಜ್ಞೆಯಿಂದ ಯುವಕ ಬದುಕುಳಿದಿದ್ದಾನೆ.
ಘಟನೆಯ ವಿವರ:
ಕೌಶಂಬಿ ಮೂಲದ ಅಂಕಿತ ಕುಮಾರ್ (26) ಎಂಬಾತ ನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಈತನಿಗೆ ಒಂದೂವರೆ ವರ್ಷದ ಹಿಂದೆ ಪ್ರಯಾಗ್‌ರಾಜ್ ಮೂಲದ ಪ್ರಿಯಾ ಎಂಬುವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಒಂದು ಮಗುವಿದೆ. ಮಂಗಳವಾರ ಮೊಬೈಲ್ ವಿಚಾರವಾಗಿ ಗಂಡ-ಹೆಂಡತಿ ನಡುವೆ ತೀವ್ರ ಜಗಳ ನಡೆದಿದ್ದು, ಪ್ರಿಯಾ ತನ್ನ ಮಗುವನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದಳು.
ಇದರಿಂದ ತೀವ್ರ ಖಿನ್ನತೆಗೊಳಗಾಗಿದ್ದ ಅಂಕಿತ ಕುಮಾರ್, ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಮ್ ವನ್ ಗಮನ್ ಪಥದ ಬಳಿಯಿರುವ ಗಂಗಾ ಮೇಲ್ಸೇತುವೆಗೆ ತಲುಪಿದ್ದಾನೆ. ನದಿಗೆ ಹಾರುವ ಮೊದಲು ತನ್ನ ಫೇಸ್‌ಬುಕ್ ಖಾತೆಯಿಂದ ಲೈವ್ ವೀಡಿಯೊ ಆರಂಭಿಸಿದ ಈತ, ಎರಡು ಪುಟಗಳ ಡೆತ್‌ನೋಟ್ ಅನ್ನು ಪ್ರದರ್ಶಿಸಿದ್ದಾನೆ.
ಅತ್ತೆಯಂದಿರ ಮೇಲೆ ಗಂಭೀರ ಆರೋಪ:
ಲೈವ್ ವೀಡಿಯೋದಲ್ಲಿ ಮಾತನಾಡಿದ ಅಂಕಿತ, ತನ್ನ ಪತ್ನಿಯ ಮನೆಯವರು ತನಗೆ ನಿರಂತರ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ತನಗೆ ಕಣ್ಣಿನ ಬಳಿಯಿದ್ದ ಗಾಯದ ಗುರುತನ್ನು ತೋರಿಸಿ, “ನಿನ್ನೆ ಪತ್ನಿಯ ಮನೆಯವರು ಮನೆಗೆ ಬಂದು ನನ್ನ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಫೋನ್ ಮೂಲಕವೂ ಬೆದರಿಕೆ ಹಾಕುತ್ತಿದ್ದಾರೆ” ಎಂದು ಕಣ್ಣೀರಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಪ್ರತೀಕ್ ಸೇರಿದಂತೆ ಹಲವು ವ್ಯಕ್ತಿಗಳ ಹೆಸರುಗಳನ್ನು ಲೈವ್‌ನಲ್ಲಿ ಉಲ್ಲೇಖಿಸಿ, ತನ್ನ ನಿರ್ಧಾರಕ್ಕೆ ಅವರೇ ಕಾರಣ ಎಂದು ಹೇಳಿದ್ದಾನೆ.
ತನ್ನ ಕಷ್ಟದ ಬಗ್ಗೆ ವರ್ಷದ ಹಿಂದೆಯೇ ಪೋಲಿಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದೂ ಈತ ವೀಡಿಯೋದಲ್ಲಿ ಆರೋಪಿಸಿದ್ದಾನೆ. ನಂತರ ಸಹೋದರರಿಗೆ ಮನವಿ ಮಾಡಿ, ನದಿಗೆ ಹಾರಿದ್ದಾನೆ.
ಮೀನುಗಾರರಿಂದ ರಕ್ಷಣೆ – ತನಿಖೆ ಆರಂಭ:
ಅಂಕಿತ ನದಿಗೆ ಹಾರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ನದಿಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಬಳಿಕ ಅವರ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅಂಕಿತ ಕುಮಾರ್‌ನನ್ನು ಮುರಾತ್‌ಗಂಜ್‌ನ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೌಶಂಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಫೇಸ್‌ಬುಕ್ ಲೈವ್‌ನಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಖಿನ್ನತೆಯಿದ್ದರೆ ತಕ್ಷಣವೇ ಸಹಾಯವಾಣಿ ಅಥವಾ ತಜ್ಞರನ್ನು ಸಂಪರ್ಕಿಸಿ.





Leave a comment