ಬೆಂಗಳೂರು: ಒಂದು ವಾರದಿಂದ ರಾಜ್ಯದ ಹಲವೆಡೆ ವಿಪರೀತ ಮಳೆ ಸುರಿಯುತ್ತಿದೆ. ಕರ್ನಾಟಕದ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚಿನ ಜತೆಗೆ ಗಂಟೆಗೆ 30-40 ಕಿ.ಮೀ ಗಾಳಿ ಬೀಸುವ ನಿರೀಕ್ಷೆಯಿದೆ. ಮಲೆನಾಡು ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾದರೆ, ಕರಾವಳಿಯಲ್ಲಿ ವ್ಯಾಪಕ ಲಘುದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಯೆಲ್ಲೋ ಅಲರ್ಟ್ ಕರಾವಳಿ ಮತ್ತು ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆಯು ಮುಂದುವರಿದಿದೆ. ಗುಡುಗು ಸಹಿತ ಗಾಳಿಗೆ ವೇಗವು 40-50 ಕಿ.ಮೀ ಇರಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ ಹೇರಲಾಗಿದೆ.