ಬೆಂಗಳೂರು: “ಡಿ ಕೆ ಶಿವಕುಮಾರ್ ಬಂದ ಬರ ತಂದ ಎಂದು ಅನೇಕ ಜನ ಟೀಕೆ ಮಾಡುತ್ತಿದ್ದರು. ಆದರೆ ದೇಶದ ಪ್ರಧಾನಿಯವರೇ ಬರ ಬರಲಿದೆ ಎಂದಿದ್ದರು. ಎರಡು- ಮೂರು ವರ್ಷಗಳಿಗೊಮ್ಮೆ ಬರ ಬರುವುದು ಪ್ರಕೃತಿ ನಿಯಮ. ಅಜ್ಜಯ್ಯನವರನ್ನು ಬರದ ವಿಚಾರವಾಗಿ ಕೇಳಿದೆ. ಅವರು ಮೂರು ದಿನದ ನಂತರ ಉತ್ತರ ಸಿಗುತ್ತದೆ ಎಂದರು. ಈಗ 70 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಭಾರತ್ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಧರ್ಮಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನಾನು ರಾಜ್ಯದ ದೊರೆಯಲ್ಲ, ಸೇವಕ. ಎಂದಿಗೂ ನನ್ನ ಆ ರೀತಿ ಕರೆಯಬೇಡಿ. ದೊರೆಗಳ ಕಾಲ ಹೋಗಿದೆ. ಈಗ ಸಂವಿಧಾನ, ಪ್ರಜಾಪ್ರಭುತ್ವದ ಕಾಲ. ನನಗೆ ಇತಿಹಾಸ ಓದುವುದರ ಮೇಲೆ ಆಸಕ್ತಿಯಿಲ್ಲ. ಇತಿಹಾಸ ಸೃಷ್ಟಿಸಲು ಆಸಕ್ತಿ” ಎಂದರು.
“ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಸರ್ಕಾರದ ಕೆಲಸ ದೇವರ ಕೆಲಸ ಎಂದಿದ್ದಾರೆ. ಈಗ ರಾಜ್ಯದ ಜನರ ಕಾಯಕ ಮಾಡುವ ಅವಕಾಶ ಸಿಕ್ಕಿದೆ. ಈ ಪ್ರತಿ ಕ್ಷಣವನ್ನೂ ಬಳಸಿಕೊಳ್ಳುತ್ತೇನೆ. ನಮ್ಮ ಹುಟ್ಟು ಸಾವಿನ ಮಧ್ಯೆ ಸಾಧನೆ ಮಾಡೋಣ” ಎಂದು ಹೇಳಿದರು.
“ಮಾನವ ಜಾತಿ, ಮಾನವ ಧರ್ಮಕ್ಕೆ ಸೇರಿದ ಮಠಗಳಲ್ಲಿ ರಂಭಾಪುರಿ ಮಠ ಮುಖ್ಯವಾದುದು. ಎಲ್ಲಾ ವರ್ಗದ ಜನರಿಗೂ ಮಾರ್ಗದರ್ಶನ ನೀಡುತ್ತಾ ಬಂದಿದೆ. ನಾವು ಜೀವನದಲ್ಲಿ ಹುಡುಕಿಕೊಂಡು ಹೋಗುವ ನೆಮ್ಮದಿ ಶಾಂತಿಗೆ ಇಂತಹ ಮಠಗಳಿಂದ ಮಾರ್ಗದರ್ಶನ ದೊರೆಯುತ್ತದೆ” ಎಂದು ಹೇಳಿದರು.
“ಜನ ರಾಮ ಮಂದಿರಕ್ಕೆ ಇಟ್ಟಿಗೆ, ಹಣ ನೀಡಿದರು. ಈಗ ಏನಾಗಿದೆ ಎಂದು ನಾನು ಚರ್ಚೆಗೆ ಹೋಗುವುದಿಲ್ಲ. ಮಠದ ಕೆಲಸಕ್ಕೆ ಜನ ಉದಾರವಾಗಿ ಕೈ ಜೋಡಿಸಬೇಕು. ಆಗ ನಿಮ್ಮ ಹೆಸರು ಉಳಿಯುತ್ತದೆ. ಧರ್ಮ, ಸಂಸ್ಕೃತಿ ಬೆಳೆಯುತ್ತದೆ” ಎಂದು ಹೇಳಿದರು.
“ರೇಣುಕಾಚಾರ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ನನಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಅಂದಿನಿಂದಲೇ ನಾನು ಈ ಮಠದ ಅನುಯಾಯಿ. ನನ್ನಂತಹ ನೂರಾರು ಶಿಷ್ಯರು ಇಲ್ಲಿ ತಯಾರಾಗಿದ್ದಾರೆ. ಗುರುವೇ ಶಿವ, ಗುರುವೇ ಪ್ರಸಾದ, ಗುರುವೇ ಆಚಾರ, ಗುರುವೇ ಜಗತ್ತು. ಈ ಗುರುವಿನ ಹಾದಿಯಲ್ಲಿ ನಡೆದರೆ ಆಚಾರ. ನಡೆ, ನುಡಿ, ಸತ್ಕರ್ಮ ಇವೇ ಧರ್ಮದ ನಿಜ ರೂಪ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ, ನಾವು ಧರ್ಮವನ್ನು ರಕ್ಷಿಸಿದರೆ. ಧರ್ಮ ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.





Leave a comment