ವಿಜಯಪುರ: ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಸಾವಿನ ಮನೆಯಾಗಿದೆ. ಬಾಣಂತಿಯರು, ಶಿಶುಗಳು ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ರೈತರು, ಪ್ರಾಮಾಣಿಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆತ್ಮಹತ್ಯೆಯ ದಾರಿಹಿಡಿದಿದ್ದಾರೆ. ಈ ಬಗ್ಗೆ ಚಿಂತಸಬೇಕಾದ ಕಾಂಗ್ರೆಸ್‌ನವರು ಮತ್ತು ಸರ್ಕಾರದವರು ಸಾವಿನ ಮನೆಯಲ್ಲಿ ಡಿನ್ನರ್ ರಾಜಕೀಯ ಹಾಗೂ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ (ಜ.10) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಣಂತಿಯರು, ಕಂದಮ್ಮಗಳು, ರೈತರು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಾವುಗಳು ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಮಾತ್ರ ತನಗೆ ಏನೂ ಸಂಬಂಧವಿಲ್ಲವೇನು ಎಂಬಂತೆ ವರ್ತಿಸುತ್ತಿದೆ. ಬಾಣಂತಿಯರು ಹಾಗೂ ಶಿಶುಗಳ ಸಾವು ಗಂಭೀರ ವಿಷಯವಾಗಿದೆ. ಈ ಸಾವು ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ? ಮೃತರ ಎಷ್ಟು ಮರಣೋತ್ತರ ಪರೀಕ್ಷೆಯಾಗಿದೆ? ಬಡ ಬಾಣಂತಿಯರ ಸಾವಿಗೆ ಕಾರಣವೇನು? ವೈದ್ಯರ ನಿರ್ಲಕ್ಷ್ಯನಾ? ಔಷಧಿಯ ಕಾರಣನಾ? ಆಸ್ಪತ್ರೆಗಳು ಕಾರಣನಾ? ಎಂಬುವುದನ್ನು ಪತ್ತೆ ಹಚ್ಚಬೇಕು. ಸರ್ಕಾರಿ ಆಸ್ಪತ್ರೆಗಳು ಎಂದರೆ ಬಡವರು ಭಯ ಪಡುವ ಸ್ಥಿತಿಯನ್ನು ಯಾಕೆ ನಿರ್ಮಿಸಿದ್ದೀರಿ? ಈ ಬಗ್ಗೆ ತನಿಖೆಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದ ನಂತರ, ಅವರು ಸಂವೇದನೆ ಕಳೆದುಕೊಂಡ ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರ ಹೃದಯಹೀನ ರೀತಿಯಲ್ಲಿ ವರ್ತಿಸುತ್ತಿದೆ. ಕಲ್ಲು ಹೃದಯಯನ್ನು ಈ ಸರ್ಕಾರ ಹೊಂದಿದೆ. ಸಂವೇದನಾ ರಹಿತರಾಗಿರುವ ಸರ್ಕಾರದ ಯಾವುದೇ ಸಚಿವರ ಮೇಲೂ ನಮಗೆ ನಂಬಿಕೆ ಇಲ್ಲ. ಮೇಲಾಗಿ ನಿಮ್ಮ ಒಳರಾಜಕೀಯ ಆಮೇಲೆ ಮಾಡಿಕೊಳ್ಳಿ. ಸಾವಿನ ಸರಣಿ ನಿಲ್ಲಿಸುವತ್ತ ಗಮನ ಕೊಡಿ. ಮುಡಾ, ವಾಲ್ಮೀಕಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹರಗಣಗಳೇ ಸಾಧನೆಗಳು ಆಗಲ್ಲ. ಈ ಹಗರಣಗಳು ಅಥವಾ ಬೆಲೆ ಏರಿಕೆಯನ್ನೇ ಸಾಧನೆ ಎಂದು ಸರ್ಕಾರ ಭಾವಿಸಿದಂತೆ ಕಾಣುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಶೇ.60ಕ್ಕೆ ತಲುಪಿದೆ. ಈ ಬಗ್ಗೆ ಸಾಕ್ಷಿ ಕೇಳುವ ಬದಲಿಗೆ ನಿಮ್ಮ ಆತ್ಮಸಾಕ್ಷಿಯೇ ಪ್ರಶ್ನೆ ಮಾಡಿಕೊಳ್ಳಿ ಎಂದು ಟೀಕಾ ಪ್ರಹಾರ ನಡೆಸಿದರು.
ಮಾಜಿ ಸಚಿವ ಎನ್.ಮಹೇಶ ಮಾತನಾಡಿ, ಈ ಸರ್ಕಾರ ಸಂವೇದನಾರಹಿತ ಮತ್ತು ಅಭಿವೃದ್ಧಿ ಶ್ಯೂನವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ವಾಮಮಾರ್ಗ ಹಿಡಿದಿದೆ. ಬೆಲೆ ಏರಿಕೆ, ಅಬಕಾರಿ ದರ ಹೆಚ್ಚಿಸಿ, ಅದರ ಹಣವನ್ನು ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಇದೊಂದು ಅಪರಾತಪರಾ ಆರ್ಥಿಕ ನೀತಿ. ಗಂಡನ ಹಣ ಕಸಿದು ಹೆಂಡತಿಗೆ ಕೊಡುವ ನೀತಿ ಎಂದು ದೂರಿದರು.