Home ದಾವಣಗೆರೆ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ: ಕೇಂದ್ರ ಸಚಿವರಿಗೆ ಪತ್ರ ಬರೆದು 5 ಪ್ರಮುಖ ಬೇಡಿಕೆಗಳನ್ನು ಮಂಡಿಸಿದ ಕರ್ನಾಟಕ ಸರ್ಕಾರ!
ದಾವಣಗೆರೆನವದೆಹಲಿಬೆಂಗಳೂರು

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ: ಕೇಂದ್ರ ಸಚಿವರಿಗೆ ಪತ್ರ ಬರೆದು 5 ಪ್ರಮುಖ ಬೇಡಿಕೆಗಳನ್ನು ಮಂಡಿಸಿದ ಕರ್ನಾಟಕ ಸರ್ಕಾರ!

Share
ಎಥನಾಲ್
Share

ಬೆಂಗಳೂರು: ರಾಜ್ಯಾದ್ಯಂತ ನಡೆಸಿದ ತಪಾಸಣೆ ಹಾಗೂ ಸ್ವತಂತ್ರ ಪ್ರಯೋಗಾಲಯಗಳ ವರದಿಗಳ ಆಧಾರದಲ್ಲಿ, ಪೆಟ್ರೋಲ್‌ನಲ್ಲಿನ ಎಥನಾಲ್ ಮಿಶ್ರಣದ ಪ್ರಮಾಣ ಮತ್ತು ಇಂಧನ ಗುಣಮಟ್ಟದ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಕರ್ನಾಟಕ ಸರ್ಕಾರವು 5 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.

ಎಥನಾಲ್ ಮಿಶ್ರಣಕ್ಕೆ ತಮ್ಮ ವಿರೋಧವಿಲ್ಲ ಆದರೆ ನಿಗದಿತ ಮಿತಿಗಿಂತ ಹೆಚ್ಚಿನ ಮಿಶ್ರಣದಿಂದ ವಾಹನಗಳಿಗೆ ಹಾಗೂ ಗ್ರಾಹಕರಿಗೆ ಆಗುವ ಹಾನಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮುಂದೆ ಮಹತ್ವದ ಪ್ರಸ್ತಾವನೆಗಳನ್ನು ಮಂಡಿಸಿದೆ. ಪ್ರತಿ ಹನಿ ಇಂಧನಕ್ಕೂ ತಕ್ಕ ಗುಣಮಟ್ಟ ಮತ್ತು ಮೌಲ್ಯ ದೊರೆಯಬೇಕು ಹಾಗೂ ಗ್ರಾಹಕರು ತಾವು ಖರೀದಿಸುವ ಇಂಧನದ ಗುಣಮಟ್ಟ ತಿಳಿಯುವ ಸಂಪೂರ್ಣ ಹಕ್ಕು ಹೊಂದಿದ್ದಾರೆ ಎಂದು ಸರ್ಕಾರ ಒತ್ತಾಯಿಸಿದೆ.

ಮಿಶ್ರಣದ ಪ್ರದರ್ಶನ: ರಾಜ್ಯದ ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಎಥನಾಲ್ ಮಿಶ್ರಣದ ನಿಖರವಾದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

ಬಿಲ್‌ನಲ್ಲಿ ನಮೂದು: ಗ್ರಾಹಕರಿಗೆ ನೀಡುವ ಇಂಧನ ಬಿಲ್‌ನಲ್ಲಿ ಎಥನಾಲ್ ಮಿಶ್ರಣದ ಶೇಕಡಾವಾರು ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಬೇಕು.

ಪರ್ಯಾಯ ಇಂಧನ ಲಭ್ಯತೆ: ಮಾರುಕಟ್ಟೆಯಲ್ಲಿ E20 ಜೊತೆಗೆ E10 ಮತ್ತು ಎಥನಾಲ್ ಮುಕ್ತ (Ethanol-free) ಪೆಟ್ರೋಲ್ ಕೂಡ ಗ್ರಾಹಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು.

ಸ್ವತಂತ್ರ ಗುಣಮಟ್ಟ ಪರೀಕ್ಷೆ: NABL ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಇಂಧನದ ಗುಣಮಟ್ಟದ ಕುರಿತು ನಿರಂತರ ಪರೀಕ್ಷೆಗಳನ್ನು ನಡೆಸಬೇಕು.

ವಿಶೇಷ ಪರಿಹಾರ ನಿಧಿ: ನಿಗದಿತ ಮಿತಿಗಿಂತ ಹೆಚ್ಚಿನ ಎಥನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್‌ಗೆ ಹಾನಿಯಾದರೆ, ಬಾಧಿತರಿಗೆ ಪರಿಹಾರ ನೀಡಲು ವಿಶೇಷ ‘E20 ಪರಿಹಾರ ನಿಧಿ’ಯನ್ನು ಸ್ಥಾಪಿಸಬೇಕು.

ಗ್ರಾಹಕರ ಹಕ್ಕುಗಳು, ಇಂಧನದ ಗುಣಮಟ್ಟ ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಈ ಹೋರಾಟ ಮುಂದುವರಿಯಲಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಸಿದ್ದಾರೆ.

Share

Recent Posts

Recent Comments

No comments to show.
Related Articles