ದಾವಣಗೆರೆ: ಕಳೆದ ನಾಲ್ಕು ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸುಮಾರು 37,000 ಕೋಟಿ ರೂಪಾಯಿಗಳ ಬಿಲ್ ಪಾವತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನಿರ್ಣಾಯಕ ಹೋರಾಟಕ್ಕೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಬರುವ ಮಾರ್ಚ್ 5ರಂದು ರಾಜ್ಯಾದ್ಯಂತ ಚಾಲ್ತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಸುಮಾರು ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿಗಳು ಯಾವುದೇ ಅಧಿಕೃತ ಸಭೆ ನಡೆಸದೆ, ಗುತ್ತಿಗೆದಾರರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಈಗಾಗಲೇ ಪದಾಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ತಾಲ್ಲೂಕು ಸಂಘಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುಾಗಿ ಮಾಹಿತಿ ನೀಡಿದರು.
ಯಾವ್ಯಾವ ಇಲಾಖೆಯ ಎಷ್ಟು ಬಾಕಿ..?
| ಇಲಾಖೆಯ ಹೆಸರು | ಮೊತ್ತ (ಕೋಟಿ ರೂ.ಗಳಲ್ಲಿ) |
| ಲೋಕೋಪಯೋಗಿ ಇಲಾಖೆ (PWD) | 8,370.76 |
| ಜಲಸಂಪನ್ಮೂಲ ಇಲಾಖೆ | 13,000.00 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR)* | 3,800.00 |
| ಸಣ್ಣ ನೀರಾವರಿ ಇಲಾಖೆ | 3,000.00 |
| ನಗರಾಭಿವೃದ್ಧಿ ಇಲಾಖೆ | 2,000.00 |
| ವಸತಿ ಮತ್ತು ಕೈಗಾರಿಕೆ (H & I) | 2,600.00 |
| ಕಾರ್ಮಿಕ ಇಲಾಖೆ | 2,000.00 |
| ಇತರೆ/ಗುತ್ತಿಗೆದಾರರ ಬಾಕಿ (ಸಂದರ್ಭಕ್ಕೆ ತಕ್ಕಂತೆ) | 3,600.00 |
| ಒಟ್ಟು ಮೊತ್ತ | 38,370.76 |
ಪ್ರಮುಖ ಬೇಡಿಕೆಗಳು:
ಬಾಕಿ ಇರುವ 37,000 ಕೋಟಿ ರೂ.ಗಳನ್ನು ಆದ್ಯತೆಯ ಮೇರೆಗೆ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.
ಬಿಲ್ ಪಾವತಿಯಲ್ಲಿ ಜೇಷ್ಠತೆಯನ್ನು (Seniority) ಕಡ್ಡಾಯವಾಗಿ ಪಾಲಿಸಬೇಕು.
2026-27ನೇ ಸಾಲಿನ ಆಯವ್ಯಯದಲ್ಲಿ ಬಾಕಿ ಹಣ ಬಿಡುಗಡೆಗೆ ವಿಶೇಷ ಅವಕಾಶ ಕಲ್ಪಿಸಬೇಕು.
“ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ಇಂದು ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರ ಕಣ್ಣು ತೆರೆಯದಿದ್ದರೆ ಹೋರಾಟವೊಂದೇ ದಾರಿ” ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಸರ್ಕಾರವು 2022-23, 2023-24, 2024-25 ಮತ್ತು 2025-26 ನೇ ಸಾಲಿನ ನಾಲ್ಕು ವರ್ಷಗಳ ಅವದಿಯಲ್ಲಿ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರ ಬಾಕಿ ಮೊತ್ತವು ಸುಮಾರು ರೂ.37,000.00 ಕೋಟಿಗಳನ್ನು ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ, ಸಚಿವರು, ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರನ್ನು ಹಲವಾರು ಬಾರಿ ಭೇಟಿ ಮಾಡಿ ಚರ್ಚಿಸಿದ್ದರೂ ಪ್ರಯೋಜನ ಶೂನ್ಯ ಎಂದು ದೂರಿದರು.
ಸುಮಾರು ಎರಡೂವರೆ ವರ್ಷಗಳಿಂದ 2ರಿದ 3 ಸಭೆಗಳನ್ನು ನಿಗದಿಪಡಿಸಿ, ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೇ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು, ಕೇವಲ ಭರವಸೆ ಮಾತ್ರ ಸಿಕ್ಕಿದೆ. ನಮಗೂ ಒಂದು ತಾಳ್ಮೆಯಿದೆ. ಆದರೆ ಈಗ ತಾಳ್ಮೆ ಮಿತಿ ಮೀರಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ಎಂ. ನಂದಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.





Leave a comment