SUDDIKSHANA KANNADA NEWS/ DAVANAGERE/ DATE:28-10-2024
ಕನ್ನಡಿಗರು ಎನ್ನುವ ಇತಿಹಾಸಕ್ಕೆ ನಿರ್ದಿಷ್ಟ ಕಾಲದ ನಿಖರತೆ ಕಷ್ಟ. ‘ಕನ್ನಡಿಗರು’ ಎಂದರೆ ನಮಗೆ ತಿಳುವಳಿಕೆ ಇದೆ. ‘ಕನ್ನಡಿಗರೆಂದರೆ’ ಕನ್ನಡ ತಾಯ್ನುಡಿಯಾಗಿ ಉಳ್ಳವರು. ‘ಕನ್ನಡ’ ಎನ್ನುವುದು ಕನ್ನಡಭಾಷೆ, ಜನ, ನಾಡು, ಸಂಸ್ಕೃತಿ ಎಲ್ಲವನ್ನು ಒಳಗೊಳ್ಳುವ ಪದ. ‘ಕನ್ನಡ’ ಜನತೆಯ ಸಮಸ್ಯೆಗಳು ಹಲವು. ಭಾರತದಲ್ಲಿ ‘ಆಸ್ಸಾಮ್’ನ್ನು ಬಿಟ್ಟರೆ ಅನ್ಯ ಭಾಷಿಯರ ದಮನಕ್ಕೆ ಕನ್ನಡಿಗರು ಸಿಲುಕಿರುವಷ್ಟು ಮತ್ತಾರು ಇಲ್ಲ. ಅಸ್ಸಾಮಿನ ಜನತೆ ಎಚ್ಚೆತ್ತುಕೊಂಡಿದೆ.
ಆದರೆ ಕರ್ನಾಟಕದಲ್ಲಿ? ಕನ್ನಡ ಜನ ತುಂಬಾ ಒಳ್ಳೆಯವರು ಎಂದರೆ ಸಾಕು, ಉಬ್ಬಿ (ಬಿಡುವುದು) ಹೋಗುವುದು. ಅನ್ಯ ಭಾಷೆಯ ಜನ ನಮ್ಮ ತಲೆಯನ್ನು ಸವರುತ್ತಲೇ ‘ಕನ್ನಡಿಗರಿಗೆ’ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕಿತ್ತುಕೊಂಡಿದ್ದಾರೆ.
ನಮ್ಮ ನೆಲದಲ್ಲಿ ನಮಗೇ ಅವಕಾಶಗಳು ಸಿಗದಂತೆ, ಇಲ್ಲದಂತೆ ಮಾಡಿದ್ದಾರೆ.
ಕನ್ನಡಿಗರಿಗೆ ಅಭಿಮಾನದ ಕೊರತೆ:
ಕನ್ನಡಿಗರಿಗೆ ನೆಲದ, ಜಲದ ಮತ್ತು ಭಾಷೆಯ ಕುರಿತು ಅಭಿಮಾನದ ಕೊರತೆಯಿಂದಾಗಿ ಕರ್ನಾಟಕವು (ಕನ್ನಡನಾಡು) ಕನಿಷ್ಠ 12-13 ಜಿಲ್ಲೆಗಳನ್ನು ಕಳೆದುಕೊಂಡಿರುವುದು ವಿಷಾದದ ಸಂಗತಿ. ಇಂತಹ ಸಂಗತಿಯನ್ನು ಅರಿಯುವ ಮೂಲಕ ‘ಕನ್ನಡಿಗರು’ ಎಚ್ಚರವನ್ನು, ಅಭಿಮಾನವನ್ನು, ನಾಡಿನ ಕುರಿತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಸ್ವಾತಂತ್ರ ಪೂರ್ವದಲ್ಲಿ ‘ಕನ್ನಡನಾಡು’ ಇಪ್ಪತ್ತು ಆಡಳಿತಗಳಲ್ಲಿ ಹಂಚಿಹೋಗಿತ್ತು. ಉದಾಹರಣೆ, ಸವಣೂರು, ಸಂಡೂರು, ಜಮಖಂಡಿ, ಮುಧೋಳ, ಗುರುಗುಂಟಾ, ಸುರಪುರ, ಕಿತ್ತೂರು, ಮುಂಡರಗಿ, ಚಿತ್ರದುರ್ಗ, ಮೈಸೂರು ಹೀಗೆ 20 ಸಂಸ್ಥಾನಗಳು ಕನ್ನಡ ನಾಡನ್ನು ಆಳುತ್ತಿದ್ದವು. ಬ್ರೀಟಿಷರ ಸಂದರ್ಭಕ್ಕೆ ‘ಐದು’ ಆಡಳಿತ ಪ್ರಾಂತಗಳಲ್ಲಿ ಮದ್ರಾಸ್, ಮುಂಬೈ, ಕೊಡಗು, ಹೈದರಾಬಾದ್, ಹಾಗು ಮೈಸೂರು ಪ್ರಾಂತಗಳಲ್ಲಿ ಕನ್ನಡನಾಡು ಹಂಚಿಹೋಯಿತು.
ಭಾಷಾವಾರು ಪ್ರಾಂತ ರಚನೆಯಲ್ಲಿ ಪ್ರಭೇದ:
ನವೆಂಬರ್-1-1956 ರಂದು ಭಾಷಾವಾರು ಪ್ರಾಂತ ರಚನೆಯಾದಾಗ, ಒಳನಾಡ ಕನ್ನಡಿಗರು, ಹೊರನಾಡ ಕನ್ನಡಿಗರು ಎನ್ನುವ ಪ್ರಭೇದ ಉಂಟಾಯಿತು. ಆದರೆ ಹೊರನಾಡ ಕನ್ನಡಿಗರು ಎಂಬ ವರ್ಗದಲ್ಲಿ ‘ಗಡಿನಾಡ’ ಕನ್ನಡಿಗರು ಎಂಬ ಇನ್ನೊಂದು ಒಳವರ್ಗವೂ ಇದೆ. ವಿದೇಶದಲ್ಲಿ ನೆಲೆಸಿರುವ ‘ಅನಿವಾಸಿಗಳು’ ಇದ್ದಾರೆ. ಹೀಗೆ ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು, ಅನಿವಾಸಿ ಕನ್ನಡಿಗರು ಮತ್ತು ನೆರನಾಡ ಕನ್ನಡಿಗರು ಎನ್ನುವ ಪ್ರಭೇದಗಳು ಕನ್ನಡಿಗರಲ್ಲಿ ಉಂಟಾದವು.
ಕನ್ನಡನಾಡಿನ ಗಡಿಯ ವಿಸ್ತಾರ ಎಷ್ಟು?
ಕನ್ನಡದ ಪ್ರಥಮ ಉಪಲಬ್ಧ ಗ್ರಂಥ ‘ಕವಿರಾಜಮಾರ್ಗ’ದಲ್ಲಿ ತಿಳಿಸಿದಂತೆ “ಕಾವೇರಿಯಿಂದ ಗೋದಾವರಿವರ ವಿರ್ದನಾಡದಾ ಕನ್ನಡದೋಳ್”. ಕನ್ನಡ ನಾಡಿನ ವಿಸ್ತಾರದ ಸ್ಪಷ್ಟತೆ ಆಗುವುದು. ಕನ್ನಡಿಗರ ನಿರ್ಲಕ್ಷತನ, ಹೋರಾಟದ ಕೊರತೆ, ನಾಡಿನ ಜನರ ಸ್ವಾಭಿಮಾನದ ಕೊರತೆಯಿಂದ ‘ಕನ್ನಡನಾಡು’ ಬಡವಾಗಿದೆ. ಸೀಮಿತ ವ್ಯಾಪ್ತಿಗೆ ಬಂದು ಸೊರಗಿ ಹೋಗಿದೆ. ಉತ್ತರ ಕರ್ನಾಟಕ ಗಡಿಯಿಂದ 40 ಮೈಲು, ಅಂದರೆ 100 ಕಿ.ಮಿ. ಆಚೆಗೆ ಗೋದಾವರಿ ನದಿ ಹರಿಯುತ್ತದೆ. ಆದರೆ ಈ ನದಿಯ ಆಚೆ-ಈಚೆ ಇರುವ ಶಾಸನಗಳೆಲ್ಲಾ ಕನ್ನಡದಲ್ಲಿವೆ. ಈಗ ಆ ಭಾಗವೆಲ್ಲ ಮಹಾರಾಷ್ಟ್ರ, ಆಂಧ್ರಗಳಿಗೆ ಸೇರಿಹೋಗಿದೆ. ಮುಂಬೈವರೆಗೆ ‘ಕನ್ನಡನಾಡು’ ವ್ಯಾಪಿಸಿತ್ತೆಂಬುದಕ್ಕೆ ಅದರ ಅಕ್ಕ-ಪಕ್ಕದ ಅನೇಕ ಊರಿನ ಹೆಸರುಗಳು ಸಾಕ್ಷಿ ಹೇಳುತ್ತವೆ.
ಹಂಚಿಹೋದ ಅಚ್ಚಕನ್ನಡ ಪ್ರದೇಶ:
ಮಹಾರಾಷ್ಟ್ರದಲ್ಲಿ ದೊರೆತ ಕನ್ನಡ ಶಾಸನಗಳ ಸಂಖ್ಯೆ 300. ಅಲ್ಲಿ ದೊರೆತ ಮರಾಠಿ ಶಾಸನಗಳ ಸಂಖ್ಯೆ 76. ಕರ್ನಾಟಕದ ಅಂಚಿನ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಜತ್ತ, ಉಸ್ಮಾನಾಬಾದ್, ನಾಂದೇಡ್ ಜಿಲ್ಲೆಗಳೆಲ್ಲ ಮೂಲತಃ ಅಚ್ಚ ಕನ್ನಡ ಪ್ರದೇಶಗಳು. ‘ಗೋವೆಯೂ’ ಅಷ್ಟೇ. ಮುಂಬೈನಿಂದ ಬಲಕ್ಕೆ ಇರುವ ಔರಂಗಬಾದ್ ಜಿಲ್ಲೆಯಲ್ಲಿ, ‘ಕನ್ನಡ’ ಎಂಬ ಹೆಸರಿನ ಒಂದು ತಾಲೂಕು ಇದೆ. ಆಂದ್ರಪ್ರದೇಶದ ‘ನಿಜಾಮಾಬಾದ್’, ಮೇಡಕ್, ಮೆಹಬೂಬನಗರ, ಕರ್ನೂಲ್, ಅನಂತಪುರ, ಚಿತ್ತೂರು, ಜಿಲ್ಲೆಗಳಲ್ಲಿ ಬಹು ಸಂಖ್ಯೆಯ ‘ಕನ್ನಡ ಶಾಸನಗಳು’ ದೊರಕಿದ್ದು ಅವೆಲ್ಲ ಮೂಲತಃ ಕನ್ನಡನಾಡಿನ ಜಿಲ್ಲೆಗಳೇ
ಆಗಿದ್ದವು. ಅಲ್ಲೆಲ್ಲ ಕನ್ನಡ ಮಾತನಾಡುವ ಜನ ಇಂದಿಗೂ ಸಾಕಷ್ಟು ಇದ್ದಾರೆ.
ತಮಿಳುನಾಡಿನ ‘ನೀಲಗಿರಿ’ ಜಿಲ್ಲೆ ಕನ್ನಡ ಪ್ರದೇಶವೇ ಇಂದಿಗೂ ‘ಕನ್ನಡಿಗರು’ ಅಲ್ಲಿ ಬಹಳಷ್ಟು ಲಭ್ಯ. ಕೇರಳದ ‘ಕಾಸರಗೋಡ’ ಕನ್ನಡ ಪ್ರದೇಶವೇ. ಅಂದಾಜು ಇಂದಿನ ಕರ್ನಾಟಕ ಕನಿಷ್ಠ 13 ಜಿಲ್ಲೆಯನ್ನು ಹಾಗೂ ‘ಗೋವಾ’ವನ್ನು ಕಳೆದುಕೊಂಡಿದೆ.
ಕನ್ನಡಿಗರ ನಾಡಿನ ದುಃಖದ ಚರಿತ್ರೆ:
ಈಗ ಕರ್ನಾಟಕಕ್ಕೆ ಉಳಿದಿರುವುದು ಹೊಸ ಜಿಲ್ಲೆಗಳು ಸೇರಿ 31 ಜಿಲ್ಲೆಗಳು. ನಮಗೆ ಅಸ್ಥಿರವಾದ ರಾಜಕೀಯ ಗಡಿಗಳು ಇವೆಯೇ ಹೊರತು ಭಾಷಿಕ ಅಥವಾ ಸಾಂಸ್ಕೃತಿಕ ಗಡಿಗಳು ಇಲ್ಲ. ಕರ್ನಾಟಕದ ಗಡಿಗಳಲ್ಲೆಲ್ಲ ಮತ್ತು ಕರ್ನಾಟಕದ ಒಳಗೂ ಕೂಡ ಕನ್ನಡೇತರದ್ದೆ ಅಂದರೆ ಅನ್ಯಭಾಷಿಕರ ಪ್ರಾಬಲ್ಯ. ಬೆಳಗಾವಿ, ಭಾಲ್ಕಿ, ಬಸವಕಲ್ಯಾಣ, ಬೀದರ್ ತಾಲ್ಲೂಕಗಳಲ್ಲಿ ಮರಾಠಿಗರ ಪ್ರಾಬಲ್ಯ. ಮಂಗಳೂರು, ಕೊಡಗು ಜಿಲ್ಲೆಗಳಲ್ಲಿ ಮಲೆಯಾಳಿಗಳ ಪ್ರಾಬಲ್ಯ. ಕೊಳ್ಳೇಗಾಲ ಪ್ರದೇಶದ ಕಾಡುಗಳೆಲ್ಲಾ ತಮಿಳರ ವಶ. ಆಂಧ್ರರು ಬಳ್ಳಾರಿ, ಕೊಪ್ಪಳ, ರಾಯಚೂರು, ಗಂಗಾವತಿ, ಸಿಂಧನೂರು, ಮಾನ್ವಿ, ಶಹಾಪುರ, ಸುರಪುರ, ಜೀವರ್ಗಿ, ಯಾದಗಿರಿ ಪ್ರದೇಶಗಳಿಗೆ ಬಂದು ಇಲ್ಲಿಯ ರೈತರ ಜಮೀನನ್ನು ಖರೀದಿಸಿ, ಭೂಮಾಲಿಕರಾಗಿದ್ದ ಕನ್ನಡಿಗರು ಅವರ ಗದ್ದೆಗಳಲ್ಲಿ ದುಡಿಯುವಂತೆ ಮಾಡಿದ್ದಾರೆ.
ಕೆ.ಜಿ.ಎಫ್ ಹೆಸರಿಗೆ ಕರ್ನಾಟಕದಲ್ಲಿದೆ, ಅಲ್ಲಿಯ ಜನಸಂಖ್ಯೆಯಲ್ಲಿ ಶೇಕಡಾ 82 ರಷ್ಟು ತಮಿಳರು, ಬೆಂಗಳೂರು ಅಲ್ಲಿಯ ವ್ಯಾಪಾರ ಉತ್ತರ ಪ್ರದೇಶದವರ ಕೈಗೆ, ಉದ್ಯೋಗಗಳೆಲ್ಲ ತಮಿಳು, ಮಲೆಯಾಳಿಗಳ ಪಾಲಿಗೆ, ಬೆಂಗಳೂರಿನ ಕೈಗಾರಿಕೆಗಳಲ್ಲಿ ಅನ್ಯ ಭಾಷೆಯರೇ ಅಲ್ಲಿನ ಉದ್ಯೋಗಿಗಳು.
ಮಹಾಜನ್ ವರದಿ ಅನುಷ್ಠಾನ ಯಾವಾಗ?
ರಾಜ್ಯಗಳ ಭಾಷವಾರು ಪ್ರಾಂತಗಳು 1956ರಲ್ಲಿ ವಿಂಗಡಣೆಯಾದ ಬಳಿಕ ಮಹಾರಾಷ್ಟ್ರ ದೊಡ್ಡ ಮಟ್ಟದ ಹೋರಾಟ, ಅಮರಣಾಂತ ಉಪವಾಸ, ಸತ್ಯಾಗ್ರಹದ ಮೂಲಕ ರಾಜ್ಯಗಳ ಗಡಿ ವಿವಾದಗಳನ್ನು ಇತ್ಯರ್ಥ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿತು. ಇದರಿಂದ ಕೇಂದ್ರ ಸರ್ಕಾರ ಮಹಾಜನ್ ಆಯೋಗವನ್ನು ನೇಮಿಸಿತು. ಮೆಹರ್‌ಚಂದ್ ಮಹಾಜನ್ ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 1966ರಲ್ಲಿ ರಚನೆಗೊಂಡ ಆಯೋಗವು 2,240 ಮನವಿ ಸ್ವೀಕರಿಸಿ 1967ರಲ್ಲಿ ಸರ್ಕಾರಕ್ಕೆ ತನ್ನ ವರದಿಸಲ್ಲಿಸಿತು. ಮಹಾರಾಷ್ಟ್ರ ಈ ಆಯೋಗದ ವರದಿಯನ್ನೇ ತಿರಸ್ಕರಿಸಿ ಸುಪ್ರೀಂಕೋರ್ಟಿಗೆ ಮೊರೆ ಹೋಯಿತು. ಪ್ರಕರಣ ಇಂದಿಗೂ ಜೀವಂತವಾಗಿದೆ.
ಕರ್ನಾಟಕಕ್ಕೆ ಮಹಾರಾಷ್ಟ್ರದ 247 ಹಳ್ಳಿಗಳನ್ನು ಕೊಡಬೇಕೆಂದು ಆಯೋಗ ತಿಳಿಸಿತು. ಕೇರಳದ ‘ಕಾಸರಗೋಡ್’ ಕರ್ನಾಟಕಕ್ಕೆ ನೀಡಬೇಕೆಂದು ಆಯೋಗ ಹೇಳಿದರೂ ಕೇರಳ ಈ ವರದಿಯನ್ನು ತಿರಸ್ಕರಿಸಿತು. ಮಹಾಜನ್ ವರದಿ ಅನುಷ್ಠಾನವಾದರೆ ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು, ಸಂಪೂರ್ಣ ಅಕ್ಕಲಕೋಟೆ ತಾಲ್ಲೂಕು, ಜತ್ತ
ತಾಲ್ಲೂಕಿನ 44 ಹಳ್ಳಿಗಳು, ಗಡಹಿಂಗ್ಲಜ ತಾಲ್ಲೂಕಿನ 15 ಹಳ್ಳಿಗಳು, ಕೇರಳದ ಚಂದ್ರಗಿರಿ ನದಿಯ ಉತ್ತರ ಭಾಗ ಕಾಸರಗೋಡ್ ಸಹಿತ ಕರ್ನಾಟಕಕ್ಕೆ ಬರುತ್ತವೆ. 1967 ರಿಂದ 2024ರ ವರೆಗೆ 57 ವರ್ಷ ಕಳೆದರೂ ಮಹಾಜನ್ ವರದಿಯ ಅನುಷ್ಠಾನ ಆಗದೇ ಇರುವುದು ವಿಷಾದದ ಸಂಗತಿಯಾಗಿದೆ.
ಗಡಿನಾಡಿನ ‘ಕನ್ನಡಕ್ಕೆ’ ಪುನರುಜ್ಜೀವನ ಬೇಕು:
ಗಡಿನಾಡಿನಲ್ಲಿ ‘ಕನ್ನಡ’ ವಿಕಸನಕ್ಕೆ ಪ್ರಯತ್ನಿಸಿದವರಲ್ಲಿ ಡಾ. ಡಿ.ಸಿ. ಪಾವಟೆ ಪ್ರಮುಖರು. ಮಹಾರಾಷ್ಟ್ರದ ಪ್ರಥಮ ಶಿಕ್ಷಣ ಸಂಚಾಲಕರಾಗಿ ಗಡಿನಾಡುಗಳಲ್ಲಿ ಕನ್ನಡ ಶಾಲೆ ಆರಂಭಿಸಲು ಅನುಮತಿ ನೀಡಿದ್ದು ಆರಂಭದ ಯತ್ನ. ಇಂದು ಟಿ.ವಿ. ಮಾಧ್ಯಮಗಳು, ಪತ್ರಿಕೆಗಳು, ಗಡಿನಾಡಿನ ಕನ್ನಡಿಗರ ಸಮಸ್ಯೆಯ ಮೇಲೆ ಬೆಳಕು ಚೆಲ್ಲಬೇಕು. ಕರ್ನಾಟಕ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹತ್ತಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಗಡಿನಾಡಿನಲ್ಲಿ ಕನ್ನಡ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಕನ್ನಡ ಪಠ್ಯಪುಸ್ತಕಗಳ ವಿತರಣೆ, ವಸತಿಶಾಲೆ, ಕನ್ನಡ ಸಂಘಗಳಿಗೆ ಪ್ರೊತ್ಸಾಹ, ಉದ್ಯೋಗದಲ್ಲಿ ಆದ್ಯತೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕನ್ನಡ ಶಿಕ್ಷಕರ ತರಬೇತಿ ಸಂಸ್ಥೆ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗೋಷ್ಠಿ, ಚರ್ಚಾಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಅಕಾಡೆಮಿ ಮತ್ತು ಪ್ರಾಧಿಕಾರಗಳಲ್ಲಿ ಗಡಿನಾಡ ಕನ್ನಡಿಗರಿಗೆ ಆದ್ಯತೆ ನೀಡಿ, ಗಡಿನಾಡಿನಲ್ಲಿ ಕನ್ನಡ ಪುನರುಜ್ಜೀವನ ಅಥವಾ ವಿಕಸನವಾಗಲು ಚಿಂತನೆ, ಅನುಷ್ಠಾನಕ್ಕೆ ಬೇಕು ಇಚ್ಚಾಶಕ್ತಿ ಎಂಬುದು ನನ್ನ ಆಶಯವಾಗಿದೆ.