ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಆಹಾರ ಪದಗಳ ಹಣದುಬ್ಬರ ಮುಂದುವರಿದಿದ್ದು, ಸಾಮಾನ್ಯ ಜನರ ಮಾಸಿಕ ಬಜೆಟ್ ಮತ್ತಷ್ಟು ದುಬಾರಿಯಾಗಿದೆ.

ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, ಈರುಳ್ಳಿ ಬೆಲೆ ಶೇ. 116 ರಷ್ಟು ಭಾರೀ ಏರಿಕೆಯಾಗಿದ್ದರೆ, ಬೆಳ್ಳುಳ್ಳಿ ಶೇ. 61 ಮತ್ತು ನಿಂಬೆಹಣ್ಣು ಶೇ. 47 ರಷ್ಟು ದುಬಾರಿಯಾಗಿದೆ.
ಹಬ್ಬದ ಸೀಸನ್ ಹಾಗೂ ಬೇಡಿಕೆಯ ಕಾರಣದಿಂದ ಹಾಲು, ಪನೀರ್, ಮೊಸರು ಮತ್ತು ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ಬಿಸಿ ಮುಟ್ಟಿಸಿದೆ.
ಅಕ್ಕಿ (ಶೇ. 12.5), ಗೋಧಿ (ಶೇ. 3.1) ಸೇರಿದಂತೆ ಬೇಳೆಕಾಳುಗಳಾದ ತೊಗರಿ ಬೇಳೆ (ಶೇ. 15) ಹಾಗೂ ಉದ್ದಿನ ಬೇಳೆ (ಶೇ. 12) ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ಎಣ್ಣೆ, ಕಡಲೆಕಾಯಿ ಎಣ್ಣೆ ಹಾಗೂ ಸಾಸಿವೆ ಎಣ್ಣೆ ಬೆಲೆಯೂ ಕ್ರಮವಾಗಿ ಶೇ. 10 ರಿಂದ ಶೇ. 16 ರಷ್ಟು ಹೆಚ್ಚಾಗಿದೆ. ಮುಂಬರುವ ಮದುವೆ ಹಾಗೂ ಹಬ್ಬದ ಸೀಸನ್ ಕಾರಣದಿಂದ ಬೆಲೆ ಏರಿಕೆಯ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಸಚಿವಾಲಯ ಎಚ್ಚರಿಸಿದೆ.
ತರಕಾರಿ ಹಾಗೂ ಪ್ರಮುಖ ಬೆಲೆ ಏರಿಕೆ: ಈರುಳ್ಳಿ ಬೆಲೆ ಶೇ. 116, ಬೆಳ್ಳುಳ್ಳಿ ಶೇ. 61 ಹಾಗೂ ನಿಂಬೆಹಣ್ಣಿನ ಬೆಲೆ ಶೇ. 47 ರಷ್ಟು ಹೆಚ್ಚಾಗಿದ್ದು, ಟೊಮೆಟೊ ಕೂಡ ಹಣದುಬ್ಬರ ವಲಯಕ್ಕೆ ಮರಳಿದೆ.
ಡೈರಿ ಮತ್ತು ಪ್ರೋಟೀನ್ ಉತ್ಪನ್ನಗಳು: ಹಾಲಿನ ಹಣದುಬ್ಬರ ಶೇ. 4.6 ರಷ್ಟಿದ್ದರೆ, ಪನೀರ್ (ಶೇ. 5.7), ಮೊಸರು (ಶೇ. 4.4) ಹಾಗೂ ಹಾಲಿನ ಸಿಹಿತಿಂಡಿಗಳು (ಶೇ. 10) ದುಬಾರಿಯಾಗಿವೆ. ಜತೆಗೆ ಕೋಳಿ ಮಾಂಸ, ಮೀನು ಮತ್ತು ಮೊಟ್ಟೆಯ ಬೆಲೆಯೂ ಏರಿದೆ.
ಸರಕಾರದ ಕ್ರಮಗಳು: ಸರ್ಕಾರಿ ಮಧ್ಯಸ್ಥಿಕೆ ಮತ್ತು ಸರಬರಾಜು ಸರಪಳಿಯ ಸುಧಾರಣೆಯಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ.
ಆಹಾರ ವಸ್ತುಗಳ ಬೆಲೆ ಏರಿಕೆಯಿಂದ ಗೃಹಿಣಿಯರ ತಿಂಗಳ ಖರ್ಚು ಹೆಚ್ಚಾಗಿದ್ದು, ಬೆಲೆ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




