ನವದೆಹಲಿ / ಲಕ್ನೋ: ವಿರೋಧ ಪಕ್ಷಗಳು ಕ್ರಿಕೆಟ್ ಪಂದ್ಯ ಸೋತ ಮೇಲೆ ಅಂಪೈರ್‌ಗೆ ಬೈಯುವ ಸೋಲುವ ತಂಡದಂತೆ ವರ್ತಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ವೋಟ್ ಚೋರಿ’ (ಮತ ಕಳವು) ಆರೋಪಗಳ ಕುರಿತು ಸಂಸತ್ತಿನಲ್ಲಿ ಮುಕ್ತ ಚರ್ಚೆಗೆ ಬಿಜೆಪಿ ಸಿದ್ಧವಿದ್ದು, ವಿಪಕ್ಷಗಳು ಧೈರ್ಯವಿದ್ದರೆ ವಿಶೇಷ ಅಧಿವೇಶನಕ್ಕೆ ಬರಲಿ ಎಂದು ನೇರ ಸವಾಲು ಎಸೆದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ವಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದ ಅಮಿತ್ ಶಾ, “ಪಂದ್ಯ ಸೋತ ಮೇಲೆ ಕಠಿಣ ಅಭ್ಯಾಸ ಮಾಡುವ ಬದಲು ಅಂಪೈರ್ ಮೇಲೆ ಗೂಬೆ ಕೂರಿಸುವುದು ಸೂಕ್ತವಲ್ಲ. ರಾಹುಲ್ ಗಾಂಧಿಗೆ ಬೀದಿಯಲ್ಲಿ ಹೈಡ್ರಾಮಾ ಮಾಡುವುದು ಬೇಕಿದೆಯೇ ಹೊರತು ಸಂಸತ್ತಿನಲ್ಲಿ ಚರ್ಚೆ ಮಾಡುವುದಲ್ಲ” ಎಂದು ಲೇವಡಿ ಮಾಡಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಂಗದನ ಕಾಲಿನಂತೆ ಅಚಲವಾಗಿರಲಿದ್ದು, ಮುಂದಿನ ೩೦ ವರ್ಷಗಳ ಕಾಲ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕಟುವಾಗಿ ನುಡಿದಿದ್ದಾರೆ.
ಕ್ರಿಕೆಟ್ ಹೋಲಿಕೆಯ ಟಾಂಗ್: ಪಂದ್ಯ ಸೋತ ಮೇಲೆ ಅಂಪೈರ್‌ಗೆ ದೂರು ನೀಡುವ ತಂಡಗಳಂತೆ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಸೋಲಿನ ಭೀತಿಯಿಂದ ಚುನಾವಣಾ ಆಯೋಗವನ್ನು ನಿಂದಿಸುತ್ತಿದ್ದಾರೆ.
ವಿಶೇಷ ಅಧಿವೇಶನದ ಸವಾಲು: ‘ವೋಟ್ ಚೋರಿ’ ಆರೋಪಗಳ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆದು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವರು ಸವಾಲು ಹಾಕಿದ್ದಾರೆ.
ಯುಪಿ ರಾಜಕೀಯ ಸಮರ: ರಾಮಾಯಣದ ಅಂಗದನ ಕಾಲಿನಂತೆ ಬಿಜೆಪಿ ಅಚಲವಾಗಿದೆ, ಮುಂದಿನ ೩೦ ವರ್ಷಗಳ ಕಾಲ ವಿಪಕ್ಷಗಳು ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.





Leave a comment