ಚೆನ್ನೈ: ಕಲ್ಲಾಕುರಿಚಿ ಜಿಲ್ಲಾಧಿಕಾರಿ ಜೆ. ಪದ್ಮಜಾ ಅವರಿಗೆ ವಾಟ್ಸಾಪ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂಬ ಡಿಎಂಕೆ ಸಂಸದೆ ಕನಿಮೋಳಿ ಅವರ ಆರೋಪವನ್ನು ತಮಿಳಗ ವೆಟ್ರಿ ಕಳಗಂ ಶಾಸಕ ಅರುಲ್ ವಿಘ್ನೇಶ್ ತೀವ್ರವಾಗಿ ಖಂಡಿಸಿದ್ದು, ಇದು ಸಂಪೂರ್ಣ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳನ್ನು ಆಧರಿಸಿ ಕನಿಮೋಳಿ ಅವರು ಎಕ್ಸ್ (X) ವೇದಿಕೆಯಲ್ಲಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿಘ್ನೇಶ್, ಸಿಸಿಟಿವಿ ಹಾಗೂ ಬಿಗಿ ಭದ್ರತೆ ಇರುವ ಜಿಲ್ಲಾಧಿಕಾರಿಯವರ ಅಧಿಕೃತ ಬಂಗಲೆಗೆ ತಾನು ನುಗ್ಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕನಿಮೋಳಿ ಗಂಭೀರ ಆರೋಪ: ಟಿವಿಕೆ ಶಾಸಕ ಅರುಲ್ ವಿಘ್ನೇಶ್ ಅವರು ಕಲ್ಲಾಕುರಿಚಿ ಜಿಲ್ಲಾಧಿಕಾರಿಗೆ ಅಸಭ್ಯ ಸಂದೇಶ ಕಳುಹಿಸಿದ್ದಾರೆ, ಮದ್ಯದ ನಶೆಯಲ್ಲಿ ನಿವಾಸಕ್ಕೆ ತೆರಳಿ ಕಿರುಕುಳ ನೀಡಿದ್ದಾರೆ ಹಾಗೂ ಕಲೆಕ್ಟರ್‌ಗೆ ಪ್ರತ್ಯೇಕ ಭದ್ರತಾ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಕನಿಮೋಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಶಾಸಕರ ತಿರುಗೇಟು: ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಅರುಲ್ ವಿಘ್ನೇಶ್, ತಾವು ಯಾವುದೇ ತಪ್ಪು ಮಾಡಿಲ್ಲವೆಂದೂ, ಡಿಎಂಕೆ ಐಟಿ ವಿಂಗ್ ಈ ರೀತಿಯ ‘ಡರ್ಟಿ ಪಾಲಿಟಿಕ್ಸ್’ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ತಾವೇತಾನಾಗಿ ಯಾವುದೇ ತನಿಖೆಗೂ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಸರ್ಕಾರದಿಂದ ತನಿಖೆಯ ಭರವಸೆ: ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜಮೋಹನ್, ಅಧಿಕೃತ ದೂರು ಬಂದ ತಕ್ಷಣ ಹಲ್ಲೆ ಅಥವಾ ಕಿರುಕುಳದ ಆರೋಪದ ಕುರಿತು ಪಕ್ಷಾತೀತವಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





Leave a comment