ನವದೆಹಲಿ: ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ರಾಖಿ ಹಬ್ಬದ ಒಡವೆ ಜಾಹೀರಾತಿನಲ್ಲಿ ಧರಿಸಿದ್ದ ಉಡುಪಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ವಿಚಾರದಲ್ಲಿ ಕೃತಿ ಸನೋನ್ ಪರ ಬ್ಯಾಟ್ ಬೀಸಿದ್ದ ರಾಹುಲ್ ಗಾಂಧಿ, “ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆ” ಎಂದು ಹೇಳಿ #SmashThePatriarchy ಹ್ಯಾಶ್‌ಟ್ಯಾಗ್ ಬಳಸಿದ್ದರು. ಇದಕ್ಕೆ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹಿಳೆಯರ ಪರ ಎನ್ನುತ್ತಾರೆ. ಕಾಂಗ್ರೆಸ್ ಮಹಿಳಾ ವಿರೋಧಿ ಎನ್ನುವುದಕ್ಕೆ ಸಾಕಷ್ಟು ನಿದರ್ಶನ ಇದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ 33 ಸಚಿವರಿದ್ದರೂ ಒಬ್ಬೇ ಒಬ್ಬ ಮಹಿಳಾ ಸಚಿವರಿಲ್ಲ. ಇಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಎದ್ದು ಕಾಣುತ್ತದೆ. ಮಹಿಳೆಯರಿಗೆ ಪ್ರಾತಿನಿಧ್ಯ ಮತ್ತು ಆದ್ಯತೆ ನೀಡಿಲ್ಲ. ರಾಹುಲ್ ಗಾಂಧಿ ಮಹಿಳೆಯರ ಬಗ್ಗೆ ಮಾತನಾಡುವುದು ಬಿಡಬೇಕು ಎಂದು ಕಂಗನಾ ಹೇಳಿದ್ದಾರೆ.
ತ್ರಿವಳಿ ತಲಾಖ್ ಅನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲಿಸಿತ್ತು. ಮಹಿಳಾ ಮೀಸಲಾತಿ ವಿಧೇಯಕಕ್ಕೆ ಆರಂಭದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸಿತ್ತು. ಶಾ ಬಾನೋ ಪ್ರಕರಣದಲ್ಲಿ ಮಹಿಳಾ ಹಕ್ಕುಗಳ ಕಡೆಗಣನೆ ಮಾಡಿತ್ತು. ಇಂಥ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿರುವ ರಾಹುಲ್ ಗಾಂಧಿ ಮಾತನಾಡಲಿ ಎಂದು ಕಂಗನಾ ಸವಾಲು ಹಾಕಿದ್ದಾರೆ.





Leave a comment