SUDDIKSHANA KANNADA NEWS/ DAVANAGERE/ DATE:15-09-2023
ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅವರು ಸರಿ ಹೋದರಿ, ಸರಿ ಇಲ್ಲಾಂದ್ರೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಪಕ್ಷಕ್ಕೆ ಮುಜುಗರ ಆಗುವ ಹಾಗೂ ವಿರೋಧವಾಗಿ ಮಾತನಾಡದಂತೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ನಾಯಕರು ರೇಣುಕಾಚಾರ್ಯ(M. P. Renukacharya)ರ ಜೊತೆ ಮಾತನಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನವೀನ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
ಲೋಕಾಯುಕ್ತ (Lokayukta) ದಾಳಿ ಪ್ರಕರಣ: ಮಾಡಾಳ್ ವಿರೂಪಾಕ್ಷಪ್ಪ, ಪುತ್ರನ ಪ್ರಕರಣ ತನಿಖೆ ಸ್ವತಂತ್ರ ತನಿಖಾ ಸಂಸ್ಥೆಗೆ ನೀಡುವಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ಸೂಚನೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿಯಲ್ಲಿ ನಾನೂ ಇದ್ದೇನೆ. ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಅವರ ಪುತ್ರರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಹಾಗೂ ಉಚ್ಚಾಟನೆ ಕುರಿತಂತೆ ಚರ್ಚೆಯಾಗಿದ್ದು ನಿಜ. ನಮ್ಮಲ್ಲಿ ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ರೇಣುಕಾಚಾರ್ಯ (M. P. Renukacharya) ವಿಧಾನಸಭೆ ಚುನಾವಣೆಯಲ್ಲಿ ಸೋತಿರುವುದರಿಂದ ಭಾವಾನಾತ್ಮಕವಾಗಿ ಹೇಳಿಕೆ ನೀಡುತ್ತಿರುವುದು. ಸದ್ಯದಲ್ಲೇ ಎಲ್ಲವೂ ಸರಿ ಹೋಗುತ್ತದೆ ಎಂದರು.
ಬೇರೆಯವರ ಮನಸ್ಸಿಗೆ ನೋವು ಮಾಡಿ ಮಾತನಾಡುವುದು ಸರಿಯಲ್ಲ. ಏನೇ ಮಾತನಾಡಿದರೂ ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಸೋಷಿಯಲ್ ಮೀಡಿಯಾ, ಮಾಧ್ಯಮದ ಮೂಲಕ ಹೇಳಿದರೆ ಎಲ್ಲವೂ ಸರಿ ಹೋಗದು. ಪಕ್ಷದ ವ್ಯವಸ್ಥೆ ಬಗ್ಗೆ ಅವರಿಗೂ ಗೊತ್ತಿದೆ. ಪಕ್ಷದ ರಾಜ್ಯ ವರಿಷ್ಠರು ಎಲ್ಲವನ್ನೂ ಗಮಿಸುತ್ತಿದ್ದು, ಸರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಅನೇಕ ಕಡೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಹೆಸರು ಕಳುಹಿಸಿಕೊಡಲಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಏನೂ ಆಗಲ್ಲ ಎಂದು ಹೇಳಲಾಗದು. ಸರಿಯಾದ್ರೆ ಎಲ್ಲವೂ ಸರಿ ಹೋಗುತ್ತದೆ. ಇಲ್ಲಾಂದ್ರೆ ರಾಜ್ಯ ನಾಯಕರು ಕ್ರಮ ತೆಗೆದುಕೊಳ್ಳುವುದು ಖಚಿತ. ಯಾರೇ ಆಗಲೀ ಪಕ್ಷದ ವ್ಯವಸ್ಥೆಯಡಿ ಇರಬೇಕು ಎಂದು ತಿಳಿಸಿದರು.
ನಾವೆಲ್ಲಿಯೂ ರೇಣುಕಾಚಾರ್ಯ (M. P. Renukacharya) ಉಚ್ಚಾಟನೆ ಮಾಡ್ತೀವಿ ಎಂದು ಹೇಳಿಲ್ಲ. ಗುರುಸಿದ್ದನಗೌಡರು ಪಕ್ಷ ಕಟ್ಟಿ ಬೆಳೆಸಿದವರು. ರವೀಂದ್ರನಾಥ್ ಜೊತೆ ಕೆಲಸ ಮಾಡಿದವರು. ಹೆಚ್. ಎಸ್. ನಾಗರಾಜ್ ಕೆಲ ವರ್ಷಗಳ ಹಿಂದೆ ಬಂದವರು ಹಾಗೆಯೇ ಹೋದರು. ಚುನಾವಣೆ ನಡೆದ ನಂತರ ನಾಯಕರ ಬೆಂಬಲಿಗರು ಸಮಸ್ಯೆ ಸೃಷ್ಟಿ ಮಾಡ್ತಾರೆ. ಪಕ್ಷಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಶತಃ ಸಿದ್ಧ. ಸಣ್ಣಪುಟ್ಟ ಸಮಸ್ಯೆ, ಸಮನ್ವಯದ ಕೊರತೆ ಇತ್ತು. ಸರಿಹೋಗುತ್ತದೆ. ಚುನಾವಣೆಗೆ ಇನ್ನು ಸಮಯಾವಕಾಶ ಇದೆ. ಪಕ್ಷದ ವರಿಷ್ಠರು ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಲ್ಲ
ಎಂದು ಎಲ್ಲಿಯೂ ಹೇಳಿಲ್ಲ. ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಬಾರದು ಎಂದೇನಿಲ್ಲ. ಅಧಿಕಾರ ಯಾರೂ ಬೇಡ ಅಂತಾರೆ. ಲೋಕಸಭೆ ಸದಸ್ಯರಾಗುವ ಆಸೆ ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ವರ್ತನೆ ಮಾಡಬಾರದು ಅಷ್ಟೇ. ಟಿಕೆಟ್ ಯಾರಿಗೆ ಎಂಬ ಬಗ್ಗೆ ಚರ್ಚೆಯಾಗಿಲ್ಲ. ಹಾಲಿ ಸಂಸದರಿದ್ದಾರೆ. ಸಿದ್ದೇಶ್ವರ ಅಭ್ಯರ್ಥಿ ಎಂಬ ಬಗ್ಗೆ ಯಾರೂ ತೀರ್ಮಾನವೂ ಆಗಿಲ್ಲ. ಎಲ್ಲವನ್ನೂ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಚೈತ್ರಾ ಕುಂದಾಪುರ ಪರಿಚಯ ಇಲ್ಲ:
ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಇದ್ದೇನೆ. ಬಿಜೆಪಿಯಲ್ಲಿ ಯಾರೋ ಹೇಳಿದರೆಂಬ ಕಾರಣಕ್ಕೆ ಟಿಕೆಟ್ ಸಿಗಲ್ಲ. ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ
ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಪರಿಚಯ ಇಲ್ಲ ಎಂದು ಕೆ. ಎಸ್. ನವೀನ್ ಕುಮಾರ್ ತಿಳಿಸಿದರು.
ಮಂಡಳ ಸಮಿತಿ, ಜಿಲ್ಲಾ ಸಮಿತಿ ಆ ಬಳಿಕ ರಾಜ್ಯ ಸಮಿತಿಯಲ್ಲಿ ಒಪ್ಪಿಗೆ ಸಿಕ್ಕ ನಂತರ ಹೈಕಮಾಂಡ್ ಗೆ ಹೋಗುತ್ತದೆ. ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ಟಿಕೆಟ್ ಯಾರಿಗೂ ಕೊಡಲ್ಲ. ಯಾವುದೇ ಸಭೆ ನಡೆದರೂ ಅಲ್ಲಿ ಅಪೇಕ್ಷಿತರಿಗೆ ಮಾತ್ರ ಅವಕಾಶ ಇರುತ್ತದೆ. ಬೇರೆಯವರಿಗೆ ಅವಕಾಶ ಇರುವುದಿಲ್ಲ ಎಂದರು. ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನಮ್ಮಲ್ಲಿ ಮೂರು ವರ್ಷ ಅವಧಿ. ರಾಜ್ಯಾಧ್ಯಕ್ಷರೇ ಮೂರು ವರ್ಷವಾಗಿದೆ, ಬದಲಾವಣೆ ಮಾಡಿ ಎಂದಿದ್ದಾರೆ. ಕೇಂದ್ರದ ನಾಯಕರು ಈ ಬಗ್ಗೆ
ನಿರ್ಧರಿಸುತ್ತಾರೆ. ಸಹಜವಾಗಿಯೇ ಬದಲಾವಣೆ ಆಗುತ್ತದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕ ಪ್ರೊ. ಲಿಂಗಣ್ಣ, ಮಹಾನಗರ ಪಾಲಿಕೆಯ ಉಪ ಮೇಯರ್ ಯಶೋಧಾ, ಎಲ್. ಡಿ. ಗೋಣಪ್ಪ, ಕೆ. ಎಂ. ವೀರೇಶ್,
ಪ್ರಸನ್ನಕುಮಾರ್, ಗೌರಮ್ಮ, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಜಯಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.