SUDDIKSHANA KANNADA NEWS/ DAVANAGERE/ DATE:30-04-2023
ದಾವಣಗೆರೆ (DAVANAGERE): ಸಾಮಾಜಿಕ ನ್ಯಾಯ ನೀಡುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಸ್ಸಿಗೆ ಶೇಕಡಾ 7, ಎಸ್ಟಿಗೆ ಶೇ.3ರಷ್ಟು ಮೀಸಲಾತಿ ಹೆಚ್ಚಿಸಿದ್ದೇವೆ. ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಶೇ. 2 ರಷ್ಟು ಮೀಸಲಾತಿ ನೀಡಿದ್ದೇವೆ. ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ (SIDDARAMAI) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (D. K. SHIVAKUMAR) ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ ಪಡೆಯುತ್ತೇವೆ ಎನ್ನುತ್ತಾರೆ. ಯಾರ ಮೀಸಲಾತಿ ವಾಪಸ್ ಪಡೆಯುತ್ತೀರಾ, ಯಾಕೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಪ್ರಶ್ನಿಸಿದರು.
ಹೊನ್ನಾಳಿ ಪಟ್ಟಣದ ಅಗಳ ಮೈದಾದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಗುಂಪು, ಸಮಾಜಗಳ ನಡುವೆ ಅಶಾಂತಿ ಉಂಟಾಗಿದೆ. ಸಮುದಾಯಗಳ ನಡುವೆ ಬೆಂಕಿ ಹಚ್ಚಿದ್ದಾರೆ. ಬೆಂಗಳೂರು, ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಶಿವಮೊಗ್ಗ(SHIVAMOGGA)ದಲ್ಲಿ ಹರ್ಷ, ಮಂಗಳೂರಿನಲ್ಲಿ ಪ್ರವೀಣ್ ಹತ್ಯೆಯಾಗಿದ್ದು ಎಲ್ಲರಿಗೂ ನೆನಪಿದೆ. ಇದರ ಹಿಂದಿರುವ ಪಿಎಫ್ಐ ಸಂಘಟನೆ ನಿಷೇಧಿಸಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಅವರೊಂದಿಗೆ ಚರ್ಚಿಸಿ, ಸಂಪೂರ್ಣವಾಗಿ ಬ್ಯಾನ್ ಮಾಡಿದ್ದೇವೆ. ಆದ್ರೆ, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪಿಎಫ್ಐ ಸಂಘಟನೆಯ ಆರೋಪಿಗಳನ್ನು ಜೈಲಿನಿಂದ ಬಿಡಿಸಿತ್ತು. ಅಶಾಂತಿ ಸೃಷ್ಟಿಸುವವರನ್ನು ಜೈಲಿಗೆ ನಾವು ಕಳುಹಿಸಿದರೆ ಅಂಥವರ ರಕ್ಷಣೆಗೆ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಡಿ. ಕೆ. ಶಿವಕುಮಾರ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮಲಪ್ರಭಾ ನಾಲಾ ಯೋಜನೆಯಲ್ಲಿ 400 ಕೋಟಿ ರೂಪಾಯಿ ಹಗರಣ ಆಗಿದೆ. ಬಿಬಿಎಂಪಿಯ ಬೋರ್ ವೆಲ್ ಗಳಲ್ಲಿ ಹಗರಣ, ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿ, ಸ್ಟೀಲ್ ಬ್ರಿಡ್ಜ್ ನಲ್ಲಿ ಹಗರಣವಾಗಿದೆ. ಹೇಳುತ್ತಾ ಹೋದರೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರತಿವರ್ಷವೂ ಹಗರಣ ನಡೆದಿದೆ. ಇಂಥವರಿಗೆ ಆರೋಪ ಮಾಡಲು ನೈತಿಕತೆ ಇಲ್ಲ. ಅಕ್ರಮ ಆಸ್ತಿ ಗಳಿಕೆ, ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ (D. K. SHIVAKUMAR) ಜಾಮೀನಿನ ಮೇಲೆ ಹೊರಗಡೆ ಇಲ್ಲವೇ. ರಾಹುಲ್ ಗಾಂಧಿ (RAHUL GANDHI), ಸೋನಿಯಾ ಗಾಂಧಿ (SONIA GANDHI), ಶಿವಕುಮಾರ್ ಸೇರಿದಂತೆ ಹಲವರಿಗೆ ಜಾಮೀನು ಸಿಗದಿದ್ದರೆ ಜೈಲಿನಲ್ಲಿರುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಭಾರತ್ ಆಯುಷ್ಮಾನ್ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ನಿಲ್ಲಿಸಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಕೇವಲ 17 ರೈತರ ಹೆಸರು ಕಳುಹಿಸಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಪಟ್ಟಿ ಕಳುಹಿಸುತ್ತಿರಲಿಲ್ಲ. 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ನೀಡುವಂಥ ಆಯುಷ್ಮಾನ್ ಯೋಜನೆಯನ್ನು ಸಿದ್ದರಾಮಯ್ಯ ನಿಲ್ಲಿಸಿದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸಲು ಬಿಟ್ಟಿಲ್ಲ. ಡಬಲ್ ಎಂಜಿನ್ ಸರ್ಕಾರ ಈ ಕೆಲಸ ಮಾಡಿದೆ ಎಂದರು.
ಬಿಜೆಪಿಯು ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಸರ್ಕಾರ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ 54 ಲಕ್ಷ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಸಿಗುವಂತಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 9 ಲಕ್ಷ ಜನರಿಗೆ ಮನೆ ನೀಡುವ ಕೆಲಸ ಮಾಡಿದ್ದೇವೆ. ಕರ್ನಾಟಕದಲ್ಲಿ 62 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡ್ ನೀಡಲು ಕ್ರಮ ಕೈಗೊಂಡಿದ್ದೇವೆ. ಸಾಮಾಜಿಕ ನ್ಯಾಯದಡಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳಿದರು.
ನಾವು ಜನಸೇವೆ ಮಾಡಲು ಬಂದಿರುವುದು. ಕೊರೊನಾ ವೇಳೆಯಲ್ಲಿ ರೇಣುಕಾಚಾರ್ಯ ಮೂರು ತಿಂಗಳ ಕಾಲ ಮನೆ ಮನೆಗೆ ಬಂದೂ ಸಂಕಷ್ಟದ ಪರಿಸ್ಥಿತಿಯಲ್ಲಿ ಸೇವೆ ಮಾಡಿದ್ದಾರೆ. ಇಂದು ರೇಣುಕಾಚಾರ್ಯ ಅವರಿಗೆ ಸಹಾಯ ಮಾಡುವ ಸಮಯ ಬಂದಿದೆ. ಮೇ. 10ರಂದು ಮತ ಹಾಕಿಸುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು, ರೇಣುಕಾಚಾರ್ಯರನ್ನು ಗೆಲ್ಲಿಸುವಲ್ಲಿ ಹಿಂದೆ ಬಿದ್ದರೆ ಡಬಲ್ ಎಂಜಿನ್ ಸರ್ಕಾರಕ್ಕೆ ಬ್ರೇಕ್ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯ, ಹೊನ್ನಾಳಿ ಬಿಜೆಪಿ ಉಸ್ತುವಾರಿ ಎಸ್. ಟಿ. ವೀರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಮಂಡಲ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಮನ್ ಕಿ ಬಾತ್ ವೀಕ್ಷಿಸಿದ ನಡ್ಡಾ:
ಹೊನ್ನಾಳಿಯಲ್ಲಿ ಎಂ. ಪಿ. ರೇಣುಕಾಚಾರ್ಯರ ಪರ ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭರ್ಜರಿ ಪ್ರಚಾರ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ“ಮನ್ ಕಿ ಬಾತ್”ಕಾರ್ಯಕ್ರಮದ 100ನೇ ವಿಶೇಷ ಸಂಚಿಕೆಯ ನೇರ ಪ್ರಸಾರವನ್ನು ಹೊನ್ನಾಳಿ ನಗರದಲ್ಲಿ ನಡ್ಡಾ ಅವರು ವೀಕ್ಷಿಸಿದರು. ಸಂಸದ ಜಿಎಂ ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್, ಹೊನ್ನಾಳಿ ಬಿಜೆಪಿ ಉಸ್ತುವಾರಿ
ಎಸ್. ಟಿ. ವೀರೇಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಂಡಲ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.
ಈ ವೇಳೆ ರೇಣುಕಾಚಾರ್ಯರ ಮನೆಗೆ ನಡ್ಡಾ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಟ್ವೀಟ್ ಮಾಡಿರುವ ನಡ್ಡಾ ಅವರು ಬಿಜೆಪಿ ಮೇಲೆ ಹೊನ್ನಾಳಿ ಜನತೆಯ ಅಭಿಮಾನವನ್ನು ಕಂಡು ಸಂತಸವಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಆಧಾರಿತ
ನೀತಿಗಳ ಬಗ್ಗೆ ಜನರಿಗಿರುವ ನಂಬಿಕೆಯನ್ನು ಈ ಜನೋತ್ಸಾಹ ಸಾಬೀತುಪಡಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.