Home ದಾವಣಗೆರೆ ಒಂದೇ ಅವಿಭಕ್ತ ಕುಟುಂಬದಲ್ಲಿ ಅಣ್ಣ ಐಪಿಎಸ್, ತಂಗಿ ಐಎಎಸ್: ಪಲ್ಲವಿ ಮತ್ತು ಆದಿತ್ಯ ಮಿಶ್ರಾ ಅವರ ಯಶಸ್ಸಿನ ಹಿಂದಿರುವ 25 ವರ್ಷಗಳ ತ್ಯಾಗದ ಕಥೆ!
ದಾವಣಗೆರೆನವದೆಹಲಿಬೆಂಗಳೂರು

ಒಂದೇ ಅವಿಭಕ್ತ ಕುಟುಂಬದಲ್ಲಿ ಅಣ್ಣ ಐಪಿಎಸ್, ತಂಗಿ ಐಎಎಸ್: ಪಲ್ಲವಿ ಮತ್ತು ಆದಿತ್ಯ ಮಿಶ್ರಾ ಅವರ ಯಶಸ್ಸಿನ ಹಿಂದಿರುವ 25 ವರ್ಷಗಳ ತ್ಯಾಗದ ಕಥೆ!

Share
ಐಪಿಎಸ್
Share

ಭೋಪಾಲ್: ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಕೇವಲ ಅಭ್ಯರ್ಥಿಯ ಪರಿಶ್ರಮದಿಂದ ಮಾತ್ರವಲ್ಲ, ಅದರ ಹಿಂದೆ ಇಡೀ ಕುಟುಂಬದ ತ್ಯಾಗ, ಶಿಸ್ತು ಮತ್ತು ಪ್ರೋತ್ಸಾಹವಿರುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ದೇವಾಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಆದಿತ್ಯ ಮಿಶ್ರಾ ಮತ್ತು ಅವರ ಕಿರಿಯ ಸಹೋದರಿ, ಪಂಜಾಬ್ ಕೇಡರ್ ಐಎಎಸ್ ಅಧಿಕಾರಿ ಪಲ್ಲವಿ ಮಿಶ್ರಾ ಅವರ ಜೀವನವೇ ಸಾಕ್ಷಿಯಾಗಿದೆ.

ಭೋಪಾಲ್‌ನ ಅವಿಭಕ್ತ ಕುಟುಂಬವೊಂದರ ಸಾಮೂಹಿಕ ಪ್ರಯತ್ನದಿಂದಾಗಿ ಇಂದು ಒಂದೇ ಮನೆಯ ಅಣ್ಣ-ತಂಗಿ ದೇಶದ ಉನ್ನತ ನಾಗರಿಕ ಸೇವಾ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ.

2018ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಆದಿತ್ಯ ಮಿಶ್ರಾ ಅವರು ಇತ್ತೀಚೆಗಷ್ಟೇ ಬಾಲಾಘಾಟ್‌ನಿಂದ ದೇವಾಸ್ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದರೆ, 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಪಲ್ಲವಿ ಮಿಶ್ರಾ ಅಮೃತಸರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ (ADC) ನೇಮಕಗೊಂಡಿದ್ದಾರೆ. ತಮ್ಮ ಈ ಯಶಸ್ಸಿನ ಪಯಣದಲ್ಲಿ ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜಿ ಹಾಗೂ ಕಸಿನ್‌ಗಳ ಪಾತ್ರವನ್ನು ಆದಿತ್ಯ ಮಿಶ್ರಾ ಸ್ಮರಿಸಿದ್ದಾರೆ.

ತಂದೆಯ 25 ವರ್ಷಗಳ ತ್ಯಾಗ: ಹಿರಿಯ ವಕೀಲರಾದ ತಂದೆ ಅಜಯ್ ಮಿಶ್ರಾ ಅವರು ಮಕ್ಕಳ ಶಿಕ್ಷಣಕ್ಕಾಗಿ ಕುಟುಂಬವನ್ನು ಭೋಪಾಲ್‌ನಲ್ಲಿ ಇರಿಸಿ, ತಾವು ಜಬಲ್ಪುರ ಹೈಕೋರ್ಟ್‌ನಲ್ಲಿ ವೃತ್ತಿ ಮುಂದುವರಿಸಿದರು. ಕಳೆದ 25 ವರ್ಷಗಳಿಂದ ವಾರದಲ್ಲಿ ನಾಲ್ಕು ರಾತ್ರಿ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಾ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕಿದರು.

ತಾಯಿ ಹಾಗೂ ಅವಿಭಕ್ತ ಕುಟುಂಬದ ಬೆಂಬಲ: ಭೋಪಾಲ್‌ನ ಕಾಲೇಜೊಂದರ ಪ್ರಾಂಶುಪಾಲರಾಗಿರುವ ತಾಯಿ ಡಾ. ರೇಣು ಮಿಶ್ರಾ ವೃತ್ತಿಯ ಜೊತೆಗೆ ಮಕ್ಕಳ ಯುಪಿಎಸ್‌ಸಿ ತಯಾರಿಗೆ ಬೆನ್ನೆಲುಬಾಗಿ ನಿಂತರು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಚಿಕ್ಕಪ್ಪ ಸಂಜಯ್ ಮಿಶ್ರಾ ಶಿಕ್ಷಣ ಹಾಗೂ ವೃತ್ತಿ ನಿರ್ಧಾರಗಳಲ್ಲಿ ಮಾರ್ಗದರ್ಶನ ನೀಡಿದರೆ, ಚಿಕ್ಕಮ್ಮ ಅರ್ಚನಾ ಮಿಶ್ರಾ ತಾಯಿಯಷ್ಟೇ ಪ್ರೀತಿ ತೋರಿದರು.

ಅಣ್ಣನಿಂದ ಪ್ರೇರಣೆ ಪಡೆದ ತಂಗಿ: ಆದಿತ್ಯ ಮಿಶ್ರಾ 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ 158ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾದರು. ಅಣ್ಣನ ಯಶಸ್ಸಿನಿಂದ ಸ್ಫೂರ್ತಿ ಪಡೆದ ಪಲ್ಲವಿ ಮಿಶ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 73ನೇ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು.

ಕುಟುಂಬದ ಹಿನ್ನೆಲೆ ಮತ್ತು ಪತ್ನಿಯ ಸಹಕಾರ: ಆದಿತ್ಯ ಅವರ ತಾತ ಮಹೇಶ್ ದತ್ ಮಿಶ್ರಾ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿಯಾಗಿದ್ದರು ಹಾಗೂ 94 ವರ್ಷದ ಅಜ್ಜಿ ಊರ್ಮಿಳಾ ಮಿಶ್ರಾ 1950ರ ದಶಕದಲ್ಲಿ ಕಾಲೇಜು ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿದ್ದರು. ಐಐಟಿ ಮದ್ರಾಸ್ ಪದವೀಧರೆಯಾದ ಪತ್ನಿ ಅಮೆರಿಕದ ಕೆಲಸ ಬಿಟ್ಟು ಭಾರತಕ್ಕೆ ಮರಳಿ ವೃತ್ತಿಜೀವನಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಆದಿತ್ಯ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles