SUDDIKSHANA KANNADA NEWS/ DAVANAGERE/ DATE:10-02-2025
ಮಡಿಕೇರಿ: ನವಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಗೆ 2024-25ನೇ ಸಾಲಿನಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಅರ್ಹವಿರುವ ನವಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರಿರುವ ನವಕಾನೂನು ಪದವೀಧರರು ಷರತ್ತು ಮತ್ತು ಸೂಚನೆಗಳನ್ವಯ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸ್ವಯಂ ದೃಢೀಕರಿಸಿದ ದಾಖಲೆ ಪ್ರತಿಗಳೊಂದಿಗೆ ಸಂಬಂಧಪಟ್ಟ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಮಾರ್ಚ್, 09 ಕೊನೆಯ ದಿನವಾಗಿದೆ. ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು- ಮಡಿಕೇರಿ(ಕಾರ್ಯ ನಿರ್ವಹಣೆ-ವಿರಾಜಪೇಟೆ), ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಸೋಮವಾರಪೇಟೆ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಪೊನ್ನಂಪೇಟೆ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಕುಶಾಲನಗರ ಇಲ್ಲಿಗೆ ಅರ್ಜಿ ಸಲ್ಲಿಸಬೇಕು.
ಈ ಯೋಜನೆಯು 2024-25ನೇ ಸಾಲಿನದ್ದಾಗಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2023ರ ಜೂನ್, 01 ರಿಂದ 2024 ರ ಮೇ, 31 ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೊಂದಾಯಿಸಿದವರಿಗೆ ಮಾತ್ರ ಅನ್ವಯವಾಗುವುದು.
ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನದ ಮೊತ್ತ ಪ್ರತಿ ಮಾಹೆಗೆ ರೂ.2 ಸಾವಿರ ಒಟ್ಟು 24 ತಿಂಗಳುಗಳ ಅವಧಿಗೆ ಸೀಮಿತವಾಗಿರುವುದು. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಕಡ್ಡಾಯ ನಿವೃತ್ತಿ ಮತ್ತು ಸ್ವ ಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರು ಮತ್ತು ಅಂತಹ ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಾನೂನು ಪದವೀಧರರಿಗೆ ಸಹ ಅನ್ವಯವಾಗುವುದಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ/ ಕುಟುಂಬದ ವಾರ್ಷಿಕ ವರಮಾನದ ಮಿತಿಯು ರೂ.40 ಸಾವಿರವನ್ನು ಮೀರಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ತಿಳಿಸಿದ್ದಾರೆ.