
ಶ್ರೀನಗರ: ಜಮ್ಮು-ಕಾಶ್ಮೀರ ವಕ್ಫ್ ಮಂಡಳಿಯ ಸಮಾರಂಭವೊಂದರಲ್ಲಿ ರಾಷ್ಟ್ರೀಯ ಗೀತೆ ‘ವಂದೇಮಾತರಂ’ ಹಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ವಂದೇಮಾತರಂ ಹಾಡಿದ ಮುಸ್ಲಿಂ ಧರ್ಮಗುರುಗಳು ಇದೀಗ ಬಹಿರಂಗವಾಗಿ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಸಮಾರಂಭದಲ್ಲಿ ವಂದೇಮಾತರಂ ಗಾಯನದಲ್ಲಿ ಪಾಲ್ಗೊಂಡಿರುವುದು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾದ ತಪ್ಪು ಎಂದು ಒಪ್ಪಿಕೊಂಡಿರುವ ಧರ್ಮಗುರುಗಳು, ಅಲ್ಲಾಹನಲ್ಲಿ ಕ್ಷಮೆ ಕೋರಿ ‘ಕಲಿಮಾ’ ಪಠಿಸಿದ್ದಾರೆ.
ಕಾಶ್ಮೀರದ ಮುಸ್ಲಿಂ ಮಜ್ಲಿಸ್-ಎ-ಉಲಾಮಾ ಮತ್ತು ಪ್ರಮುಖ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ಸೇರಿದಂತೆ ಹಲವು ಧರ್ಮಗುರುಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ದೇಶಪ್ರೇಮ ಬೇರೆ, ಆದರೆ ಮಾತೃಭೂಮಿಗೆ ದೈವತ್ವ ಆರೋಪಿಸಿ ಪೂಜಿಸುವುದು ಅಥವಾ ನಮಸ್ಕರಿಸುವುದು ಇಸ್ಲಾಂನ ಏಕದೇವೋಪಾಸನೆಗೆ (ತೌಹೀದ್) ವಿರುದ್ಧವಾಗಿದೆ ಎಂದು ವಾದಿಸಿದ್ದರು.
ವಕ್ಫ್ ಮಂಡಳಿಯ ಮುಸ್ಲಿಂ ಧರ್ಮದ ಪವಿತ್ರ ಸಂಸ್ಥೆಗಳ ರಕ್ಷಣೆಯ ಹೊಣೆಹೊಂದಿರುವ ವಕ್ಫ್ ಮಂಡಳಿಯೇ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ತಾರಕಕ್ಕೇರುತ್ತಿದ್ದಂತೆ ಇಮಾಮರು ವಿಡಿಯೋ ಸಂದೇಶದ ಮೂಲಕ ತಮ್ಮ ತಪ್ಪಿಗೆ ಪಶ್ಚಾತಾಪ ವ್ಯಕ್ತಪಡಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ವಿವಾದದ ಹಿನ್ನೆಲೆ: ಸೋಮವಾರ ನಡೆದ ಜಮ್ಮು-ಕಾಶ್ಮೀರ ವಕ್ಫ್ ಮಂಡಳಿಯ ಮೊದಲ ‘ವಕ್ಫ್ ದಿನ’ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ನಾಯಕಿ ದರಕ್ಷಾನ್ ಅಂದ್ರಾಬಿ ಉಪಸ್ಥಿತಿಯಲ್ಲಿ ವಂದೇಮಾತರಂ ಪೂರ್ಣ ಆರು ಚರಣಗಳನ್ನು ನುಡಿಸಲಾಗಿತ್ತು.
ಧರ್ಮಗುರುಗಳ ಕ್ಷಮೆಯಾಚನೆ: ಕಾರ್ಯಕ್ರಮದಲ್ಲಿ ನಿಂತು ವಂದೇಮಾತರಂ ಹಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಎದುರಾದ ಹಿನ್ನೆಲೆಯಲ್ಲಿ, “ಅದೊಂದು ದೊಡ್ಡ ತಪ್ಪು, ನಾವು ಪಶ್ಚಾತಾಪ ಪಡುತ್ತೇವೆ ಮತ್ತು ಅಲ್ಲಾಹನಲ್ಲಿ ಕ್ಷಮೆ ಕೋರುತ್ತೇವೆ” ಎಂದು ಧರ್ಮಗುರುಗಳು ಸ್ಪಷ್ಟಪಡಿಸಿದ್ದಾರೆ.
ಇಸ್ಲಾಮಿಕ್ ತತ್ವಗಳ ಉಲ್ಲಂಘನೆ ಆರೋಪ: ಮಾತೃಭೂಮಿಯನ್ನು ದೇವತೆಯಂತೆ ಪೂಜಿಸುವುದು ಇಸ್ಲಾಂನ ಏಕದೇವೋಪಾಸನಾ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಮುಸ್ಲಿಂ ಮಜ್ಲಿಸ್-ಎ-ಉಲಾಮಾ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದ್ದು, ವಕ್ಫ್ ಮಂಡಳಿಯ ಈ ಧೋರಣೆಯನ್ನು ಖಂಡಿಸಿದೆ.
ಈ ವಿವಾದದ ಕುರಿತು ಜಮ್ಮು-ಕಾಶ್ಮೀರ ವಕ್ಫ್ ಮಂಡಳಿ ಅಥವಾ ಕೇಂದ್ರ ಸಚಿವರು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲವಾದರೂ, ಕಣಿವೆ ರಾಜ್ಯದಲ್ಲಿ ಈ ಘಟನೆ ಧರ್ಮ ಮತ್ತು ರಾಜಕೀಯದ ನಡುವಿನ ಹೊಸ ಚರ್ಚೆಗೆ ನಾಂದಿಹಾಡಿದೆ.
- Islamic monotheism Tawheed dispute
- Kiren Rijiju Waqf day Srinagar
- Mirwaiz Umar Farooq
- Muslim clerics repent Vande Mataram
- Vande Mataram controversy JK Waqf Board
- ಇಸ್ಲಾಂ ಏಕದೇವೋಪಾಸನೆ ತೌಹೀದ್
- ಕಿರಣ್ ರಿಜಿಜು ಕಾಶ್ಮೀರ ಭೇಟಿ
- ಮಿರ್ವೈಜ್ ಉಮರ್ ಫಾರೂಕ್
- ಮುಸ್ಲಿಂ ಧರ್ಮಗುರುಗಳ ಕ್ಷಮೆ
- ವಕ್ಫ್ ಮಂಡಳಿ ಕಾರ್ಯಕ್ರಮ
- ವಂದೇಮಾತರಂ ವಿವಾದ ಜಮ್ಮು ಕಾಶ್ಮೀರ




