ರಾಂಚಿ: ಜಾರ್ಖಂಡ್ ಸಿಮ್ಡೆಗಾ ಜಿಲ್ಲೆಯ 14 ವರ್ಷದ ಅಪ್ರಾಪ್ತ ಬುಡಕಟ್ಟು ಬಾಲಕಿಯ ಮೇಲೆ ಕಾಂಗ್ರೆಸ್ ಶಾಸಕ ಭೂಷಣ್ ಬಾರಾ ಅತ್ಯಾಚಾರ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಾಂಚಿಯಲ್ಲಿರುವ ಶಾಸಕರ ಅಧಿಕೃತ ನಿವಾಸದಲ್ಲಿ ಈ ಕೃತ್ಯ ನಡೆದಿದೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದು, ಈ ಸಂಬಂಧ ಪೋಕ್ಸೋ (POCSO) ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಮ್ಡೆಗಾ ಮೂಲದ ಬಾಲಕಿಯನ್ನು ಶಾಸಕರ ಕುಟುಂಬದವರು ಮೇ ತಿಂಗಳಲ್ಲಿ ಶಾಲೆಯಲ್ಲಿ ಓದಿಸುವುದಾಗಿ ನಂಬಿಸಿ ರಾಂಚಿಗೆ ಕರೆತಂದಿದ್ದರು. ಆದರೆ ಆಕೆಗೆ ಶಿಕ್ಷಣ ನೀಡುವ ಬದಲು ಶಾಸಕರ ಅಧಿಕೃತ ನಿವಾಸದಲ್ಲಿ ಬಲವಂತವಾಗಿ ಮನೆಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಆಗಸ್ಟ್ 5ರಂದು ಶಾಸಕ ಭೂಷಣ್ ಬಾರಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಧುರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಬಾಲಕಿ ಆರೋಪಿಸಿದ್ದಾಳೆ. ಅಲ್ಲದೆ, ವಿರೋಧಿಸಿದಾಗ ಹಲ್ಲೆ ನಡೆಸಿ, ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಆಕೆ ತಿಳಿಸಿದ್ದಾಳೆ. ವೈದ್ಯಕೀಯ ತಪಾಸಣೆಯ ವೇಳೆ ಬಾಲಕಿಗೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ: ಅಪ್ರಾಪ್ತ ಬಾಲಮಗಿಯ ದೂರಿನ ಮೇರೆಗೆ ಸಿಮ್ಡೆಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೂಷಣ್ ಬಾರಾ ವಿರುದ್ಧ ಪೊಲೀಸರು ಪೋಕ್ಸೋ ಹಾಗೂ ಬಾಲನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿಯಿಂದ ತೀವ್ರ ಆಕ್ರೋಶ: ಆರೋಪಿ ಶಾಸಕನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ನಾಯಕರ ಮೌನವನ್ನು ಪ್ರಶ್ನಿಸಿದೆ.
ಶಾಸಕರ ಸ್ಪಷ್ಟನೆ: ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಶಾಸಕ ಭೂಷಣ್ ಬಾರಾ, ಇದು ಪಕ್ಷದಿಂದ ಹೊರಹಾಕಲ್ಪಟ್ಟ ಕೆಲವರು ಕಟ್ಟಿರುವ ಸುಳ್ಳು ಆರೋಪ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆಯು ಜಾರ್ಖಂಡ್ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಆದಿತ್ಯ ಸಾಹು ಸೇರಿದಂತೆ ಪ್ರಮುಖ ನಾಯಕರು ಶಾಸಕನ ತಕ್ಷಣದ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ. ಸಂತ್ರಸ್ತ ಬಾಲಕಿಗೆ ಸೂಕ್ತ ರಕ್ಷಣೆ ನೀಡುವಂತೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಕೂಡ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಆರೋಪಗಳನ್ನು ನಿರಾಕರಿಸಿರುವ ಶಾಸಕ ಭೂಷಣ್ ಬಾರಾ ತನಿಖೆಯ ಬಳಿಕ ಸತ್ಯ ಹೊರಬರಲಿದೆ ಎಂದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್ ಮಾತನಾಡಿ, ಬಿಜೆಪಿ ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.





Leave a comment