SUDDIKSHANA KANNADA NEWS| DAVANAGERE| DATE:15-04-2023
ದಾವಣಗೆರೆ:(DAVANAGERE) ಕೇವಲ ಹರಿಹರದಲ್ಲಿ ಮಾತ್ರ ತನ್ನ ಶಕ್ತಿ ಪ್ರದರ್ಶಿಸಿದ್ದ ಜಾತ್ಯಾತೀತ ಜನತಾದಳ ಪಕ್ಷವು ಇನ್ನು ಎರಡು ಕ್ಷೇತ್ರಗಳಲ್ಲಿ ಪೈಪೋಟಿ ನೀಡುವಂಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚನ್ನಗಿರಿ ಕ್ಷೇತ್ರದಿಂದ ಕಾಂಗ್ರೆಸ್ (CONGRESS) ಟಿಕೆಟ್ ಸಿಗದೇ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ರ ಸಹೋದರನ ಪುತ್ರ ತೇಜಸ್ವಿ ಪಟೇಲ್ ಹಾಗೂ ಮಾಯಕೊಂಡ ಕ್ಷೇತ್ರದಿಂದ ಹೆಚ್. ಆನಂದಪ್ಪ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ಕಳೆದ ಎರಡು ದಿನಗಳಲ್ಲಿ ನಡೆದ ಬೆಳವಣಿಗೆಯಲ್ಲಿ ಆನಂದಪ್ಪ ಹಾಗೂ ತೇಜಸ್ವಿ ಪಟೇಲ್ (THEJASWI PATEL) ಅವರು ಜೆಡಿಎಸ್ ಪಕ್ಷ ಸೇರಿದ್ದು, ಬಿ ಫಾರಂ ಸಿಗಬೇಕಿದೆ. ಈಗಾಗಲೇ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್. ಡಿ. ದೇವೇಗೌಡ ಅವರ ಒಪ್ಪಿಗೆ ಪಡೆಯಲಾಗಿದೆ. ಹಾಗಾಗಿ, ಜೆಡಿಎಸ್ ಪಕ್ಷವು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ತೀವ್ರ ಪೈಪರೋಟಿ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಮಾಯಕೊಂಡ ಜೆಡಿಎಸ್ (JDS) ಅಭ್ಯರ್ಥಿ ಹೆಚ್. ಆನಂದಪ್ಪ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಎರಡೂವರೆ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಆದ್ರೆ, ಕಾಂಗ್ರೆಸ್ ಪಕ್ಷವು ಬಸವಂತಪ್ಪ ಅವರಿಗೆ ಟಿಕೆಟ್ ಘೋಷಿಸಿದ್ದರಿಂದ ಮುನಿಸಿಕೊಂಡಿದ್ದರು. ಪಕ್ಷೇತರರಾಗಿ ಕಣಕ್ಕಿಳಿಯಬೇಕೋ ಅಥವಾ ಚುನಾವಣೆಗೆ ನಿಲ್ಲುವುದು ಬೇಡ ಎಂಬ ಗೊಂದಲದಲ್ಲಿದ್ದ ಆನಂದಪ್ಪ ಅವರು ಕೊನೆಗೂ ತೆನೆ ಹೊತ್ತ ಮಹಿಳೆ ಕೈ ಹಿಡಿದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ನನಗೆ ಮೋಸ ಮಾಡಿವೆ. ಟಿಕೆಟ್ ನೀಡುವುದಾಗಿ ಚುನಾವಣೆಗೆ ಮುನ್ನ ಹೇಳುತ್ತಾರೆ. ಬಿ ಫಾರಂ ನೀಡಬೇಕಾದರೆ ಬೇರೆಯವರಿಗೆ ನೀಡುತ್ತಾರೆ. ಇದು ತುಂಬಾ ಬೇಸರ ತಂದಿದೆ. ಜೆಡಿಎಸ್ ನಿಂದ ಕಣಕ್ಕಿಳಿಯುತ್ತಿದ್ದೇನೆ. ನನಗೆ ಎದುರಾಳಿ ಕೇವಲ ಬಿಜೆಪಿ ಮಾತ್ರ. ಬೇರೆ ಪಕ್ಷಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತೇಜಸ್ವಿ ಪಟೇಲ್ ಅವರು ಜೆಡಿಎಸ್ ಗೆ ಬಂದಿರುವುದರಿಂದ ಆನೆ ಬಲ ಬಂದಂತಾಗಿದೆ. ಬಸವಾಪಟ್ಟಣ ಸೇರಿದಂತೆ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ತೇಜಸ್ವಿ ಪಟೇಲ್ ರ ಹಿಡಿತ ಇದೆ. ಇದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೀವನಕ್ಕಾಗಿ ರಾಜಕೀಯ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ಕಳೆದ ಎರಡೂವರೆ ವರ್ಷದಲ್ಲಿ ಕ್ಷೇತ್ರಾದ್ಯಂತ ಕಾಂಗ್ರೆಸ್ ಪರವಾಗಿ ಸಂಚಾರ ಮಾಡಿ ಸಂಘಟನೆ ಮಾಡಿದ್ದೇನೆ. ಟಿಕೆಟ್ ನೀಡುವ ಭರವಸೆ ನೀಡಿದ್ದರು. ಕ್ಷೇತ್ರದಲ್ಲಿ ಪಕ್ಷ ಬಲಪಡಿಸಿ. ಕೈ ಟಿಕೆಟ್ ನೀಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಮಾಯಕೊಂಡ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ಹುರುಪು ಹೆಚ್ಚಿಸಿದೆ ಎಂದು ತಿಳಿಸಿದರು.
ಈಗಾಗಲೇ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಜೆಡಿಎಸ್ ಸೇರಿದ್ದೇನೆ. ಸೋಮವಾರದಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುತ್ತೇನೆ. ಏಪ್ರಿಲ್ 19ರಂದು ಮತ್ತೊಮ್ಮೆ ಮೆರವಣಿಗೆ ಮೂಲಕ ತಾಲೂಕು ಕಚೇರಿಯಲ್ಲಿನ ಮಾಯಕೊಂಡ ಕ್ಷೇತ್ರದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಅಪಾರ ಬೆಂಬಲಿಗರು, ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಯಕೊಂಡ ಕಾಂಗ್ರೆಸ್ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರು ಜೆಡಿಎಸ್ ಸೇರಿದ್ದಾರೆ. ರೇಖಾ ನಾಯ್ಕ್ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲರ ಜೊತೆಗೂಡಿ ಚುನಾವಣೆ ಎದುರಿಸುವುದಾಗಿ ತಿಳಿಸಿದರು.