SUDDIKSHANA KANNADA NEWS/ DAVANAGERE/ DATE:25-01-2024
ದಾವಣಗೆರೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಿರುವುದು ಸಂತಸದ ವಿಚಾರ ಎಂದು ಎ. ಕೆ. ಫೌಂಡೇಶನ್ ಅಧ್ಯಕ್ಷರು, ಬಿಜೆಪಿ ಮುಖಂಡರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಅವರು ಸ್ವಾಗತಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರಿದ್ದ ಜಗದೀಶ್ ಶೆಟ್ಟರ್ ಅವರು ಮರಳಿ ಮನೆಗೆ ವಾಪಸ್ ಬಂದಿದ್ದಾರೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸಲು ಶ್ರಮಿಸುವುದಾಗಿ ಹೇಳಿರುವುದು ಖುಷಿಯ ವಿಚಾರ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ ಜಗದೀಶ್ ಶೆಟ್ಟರ್ ಅವರು ಆರ್ ಎಸ್ ಎಸ್ ಗರಡಿಯಿಂದ ಬಂದವರು. ಅವರ ಕುಟುಂಬವೂ ಮೊದಲಿನಿಂದಲೂ ಬಿಜೆಪಿಯಲ್ಲೇ ಇತ್ತು. ಸಂಘ ಪರಿವಾರದ ಒಡನಾಟದಲ್ಲಿತ್ತು. ಯಾವುದೋ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದ ಅವರು ಮತ್ತೆ ಬಿಜೆಪಿಗೆ ಬಂದಿದ್ದು ಬಲ ಬಂದಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಅವರ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹವಾದದ್ದು ಎಂದು ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ತುಂಬಾ ಹಿರಿಯ ನಾಯಕರು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸಿದ ನಾಯಕ. ಮತ್ತೆ ಮರಳಿ ಪಕ್ಷಕ್ಕೆ ಬಂದಿರುವುದರಿಂದ ಈ ಭಾಗದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷಕ್ಕೆ ಸಹಕಾರಿಯಾಗಲಿದೆ. ಅವರಂಥ ಹಿರಿಯ ನಾಯಕರು ಮತ್ತೆ ಪಕ್ಷಕ್ಕೆ ಆಗಮಿಸಿರುವುದರಿಂದ ಎಲ್ಲರಿಗೂ ಹೊಸ ಚೈತನ್ಯ ತಂದಿದೆ ಎಂದು ಕೆ. ಬಿ. ಕೊಟ್ರೇಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.