SUDDIKSHANA KANNADA NEWS/ DAVANAGERE/ DATE: 07-09-2023
ದಾವಣಗೆರೆ: ಕೆಲವರು ಷಡ್ಯಂತ್ರ ಹಾಗೂ ಕುತಂತ್ರ ರೂಪಿಸಿ ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ನನಗೆ ಯಾವುದೇ ನೊಟೀಸ್ ನೀಡದೇ ಉಚ್ಟಾಟನೆ ಮಾಡಿರುವುದು ಸರಿಯಲ್ಲ ಎಂದು ಜಗಳೂರು (Jagalur) ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಘಟಕ ಹಾಗೂ ರಾಜ್ಯಘಟಕದ ಗಮನಕ್ಕೆ ತರದೇ ಉಚ್ಚಾಟನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಮಾಹಿತಿ ನೀಡದೇ ಈ ಕ್ರಮ ಜರುಗಿಸಿರುವುದರ ಹಿಂದೆ ಯಾರ ಷಡ್ಯಂತ್ರ ಇದೆ ಎಂಬುದು ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಸಿಡಿದೆದ್ದಿದ್ದಾರೆ.

ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರಿಗೆ ಸದ್ಯಕ್ಕೆ ರಿಲೀಫ್, ಎಡದಂಡೆ ನಾಲೆ ನೀರು ಬಂದ್, ಬಲದಂಡೆ ನಾಲೆಯಲ್ಲಿ ನೀರು ಯಥಾಸ್ಥಿತಿ: ಆತಂಕಪಡಬೇಕಿಲ್ಲ ರೈತರು ಎಂದ ಮಧು ಬಂಗಾರಪ್ಪ
ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಶಾಸಕರು, ಮಾಜಿ ಶಾಸಕರನ್ನು ಉಚ್ಚಾಟನೆ ಮಾಡುವ ಅಧಿಕಾರ ಇಲ್ಲ ಎಂಬುದು ಬಿಜೆಪಿ ಸಂವಿಧಾನದಲ್ಲಿಯೇ ಹೇಳಿದೆ. ನನ್ನನ್ನು ಉಚ್ಚಾಟನೆ ಮಾಡುವ ಹಿಂದೆ ಬೇರೆ ಕಾರಣವೂ ಇದೆ. ಷಡ್ಯಂತ್ರವೂ
ಅಡಗಿದೆ ಎಂದು ಕಿಡಿಕಾರಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ನನ್ನ ಪುತ್ರ ಡಾ. ಟಿ. ಜಿ. ರವಿಕುಮಾರ್ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಎಲ್ಲಾ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ, ಬೆಂಬಲ ವ್ಯಕ್ತವಾಗುತ್ತಿದೆ. ಈ ಏಳಿಗೆ ಸಹಿಸದೇ ಕೆಲವರು ಈ ರೀತಿ ಏಕಾಏಕಿ ಕ್ರಮ ಕೈಗೊಂಡಿದ್ದಾರೆ. ಪುತ್ರನ ಸ್ಪರ್ಧೆ ಹತ್ತಿಕ್ಕಲು ಜಿಲ್ಲೆಯ ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಸಂಚು ರೂಪಿಸಿವೆ. ಮತದಾರರು, ಬೆಂಬಲಿಗರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಗೊಂದಲ ಆಗುವಂತ ರೀತಿಯಲ್ಲಿ ನಡೆದುಕೊಳ್ಳಲಾಗಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವೇ ಇರಲಿಲ್ಲ, ಭದ್ರವಾಗಿ ನೆಲೆಯೂರಿಲಲಿಲ್ಲ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಸೇರಿದಂತೆ ಹಲವರ ಜೊತೆ ಸೇರಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಜಿಲ್ಲೆಯಾದ್ಯಂತ ಓಡಾಡಿದ್ದೇನೆ. ಜಗಳೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕನಾಗಿಯೂ ಆಯ್ಕೆಯಾಗಿದ್ದೆ. ಪಕ್ಷದ ಆದೇಶಾನುಸಾರವಾಗಿ ಕೆಲಸ ನಿರ್ವಹಿಸಿದ್ದೇನೆ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಹೊಣೆಗಳಿಂದ ಹೊರಬಂದು ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ, ಕೆಲಸ ಮಾಡುತ್ತಲೂ ಇದ್ದೇನೆ. ಪಕ್ಷದ ಉಚ್ಚಾಟನೆ ಜಿಲ್ಲಾ ಬಿಜೆಪಿಯ ಕೆಲವರು ಸಂಚು. ರಾಷ್ಟ್ರ, ರಾಜ್ಯ ನಾಯಕರಿಗೆ ಈ ಬಗ್ಗೆ ವರದಿ ನೀಡಿ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಭದ್ರವಾಗಿ ನೆಲೆಯೂರಲು ಶ್ರಮಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.
ನಾನೂ ಆಕಾಂಕ್ಷಿ:
ಇನ್ನು ಟಿ. ಗುರುಸಿದ್ದನಗೌಡ್ರ ಪುತ್ರ ಡಾ. ರವಿಕುಮಾರ್ ಅವರು ನನ್ನ ತಂದೆಯವರು ಬಿಜೆಪಿಯಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದಾರೆ. ಪಕ್ಷ ಸಂಘಟನೆ ಮಾಡಿದ್ದಾರೆ. ಜೊತೆಗೆ ಶಾಸಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದರು. ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸದಸ್ಯನಾಗಿ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ. ಬೆಂಬಲಿಗರ ಒತ್ತಡ ಹೆಚ್ಚಿದೆ. ಈ ಕಾರಣಕ್ಕೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಟಿ. ಗುರುಸಿದ್ದನಗೌಡ, ಪುತ್ರರು ಉಚ್ಚಾಟನೆ:
ಜಗಳೂರಿನ ಮಾಜಿ ಶಾಸಕ, ಬಿಜೆಪಿ ಮುಖಂಡ ಟಿ. ಗುರುಸಿದ್ದನಗೌಡ ಮತ್ತು ಅವರ ಪುತ್ರರಾದ ಟಿ.ಜಿ.ಅರವಿಂದಕುಮಾರ್, ಟಿ. ಜಿ. ಪವನಕುಮಾರ್, ಡಾ. ಟಿ. ಜಿ. ರವಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತದ ಬಿಜೆಪಿಯ ಅಭ್ಯರ್ಥಿ ವಿರುದ್ದ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿ ಅಲ್ಪ ಮತದ ಅಂತರದ ಸೋಲಿಗೆ ಕಾರಣ ಮತ್ತು ನಿರಂತರ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಕಾರಣದಿಂದಾಗಿ ರಾಜ್ಯ ಬಿಜೆಪಿ ಶಿಸ್ತು ಪಾಲನ ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚನೆ ಮೇರೆಗೆ ಇವರನ್ನು ಭಾರತೀಯ ಜನತಾ ಪಾರ್ಟಿಯಿಂದ ಮುಂದಿನ 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಆದೇಶ ಮೇರೆಗೆ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ತಿಳಿಸಿದ್ದಾರೆ.