SUDDIKSHANA KANNADA NEWS/ DAVANAGERE/ DATE_12-07_2025
ದಾವಣಗೆರೆ: ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
READ ALSO THIS STORY: ದಾವಣಗೆರೆಯ ಹುಣಸೇಕಟ್ಟೆ ಹೆದ್ದಾರಿಯಲ್ಲಿ ಧಗಧಗನೇ ಹೊತ್ತಿ ಉರಿಯಿತು ಕಾರು: ನಾಲ್ವರು ಗ್ರೇಟ್ ಎಸ್ಕೇಪ್
ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶಿತ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.
ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್‌ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರತಿಸಿ ಸ್ಮಾರ್ಟ್ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಬಡವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಮಿಕ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಮಾತ್ರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಸಚಿವ ಲಾಡ್ ಅವರಿಂದ ಪ್ರಸ್ತುತ ಮೇ 01ರಂದು ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.
ವಿವಿಧ ಸೌಲಭ್ಯಗಳ ವಿತರಣೆ :
ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮನವರಿಗೆ ರೂ.5 ಲಕ್ಷ ಪರಿಹಾರ ಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ರೂ.10,000 ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.
ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.