Site icon Kannada News-suddikshana

ಮಂಗಳೂರು ಗಲಭೆ ಹತೋಟಿಗೆ ಬಂದಿದ್ದೇ ನಮ್ಮ ಪ್ರಾಮಾಣಿಕ ಅಧಿಕಾರಿಗಳಿಂದಲೇ: ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ

SUDDIKSHANA KANNADA NEWS/DAVANAGERE/DATE:28_10_2025

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು.

READ ALSO THIS STORY: ದಾವಣಗೆರೆ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಗಿರೀಶ್ ಆರ್. ನೇಸರ್ಗಿ ಅದ್ವಿತೀಯ ಸಾಧನೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು

ಇದೇ ರೀತಿ ಇಡೀ ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಸಾಧ್ಯ ಮಾಡಿದರೆ ಕರ್ನಾಟಕ ಪೊಲೀಸ್ ಘನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ ಎಂದರು.

ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜೊತೆ, ಡ್ರಗ್ ಜಾಲದ ಜೊತೆ ಶಾಮೀಲಾಗಿರ್ತಾರೆ. ರೌಡಿಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕುವುದು ನಿಮ್ಮಿಂದ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯ್ತು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ ಎಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಆತ್ಮಸಾಕ್ಷಿಯನ್ನು ಕೆದಕಿದರು.

ಡ್ರಗ್ ಮಾರುವವರು, ತರುವವರು, ಎಲ್ಲಿಂದ ಡ್ರಗ್ಸ್ ಬರುತ್ತದೆ, ಈ ಜಾಲದ ಏಜೆಂಟರು ಯಾರ್ಯಾರು ಎನ್ನುವುದೂ ನಿಮಗೇ ಗೊತ್ತಿರುತ್ತದೆ. ಆದಷ್ಟು ಬೇಗ ರಾಜ್ಯ, “ಡ್ರಗ್ ಮುಕ್ತ ಕರ್ನಾಟಕ” ಆಗಲಿ, ಮಾಡಿ ತೋರಿಸಿ ಎಂದು ಕರೆ ನೀಡಿದರು.

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು

ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ದ ನಿಲುವು ತಳೆಯಬೇಕು ಎಂದರು.

Exit mobile version