ಆಗ್ರಾ: ಮುಸ್ಲಿಂ ವೇಷ ಧರಿಸಿ ಅಯೋಧ್ಯೆಯ ಹಿಂದೂಗಳನ್ನು ನಿಂದಿಸುವ ವಿಡಿಯೋ ಮಾಡಿದಾತನನ್ನು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನ ವಿಧಿಸಿ ಆಗ್ರಾ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ವ್ಯಕ್ತಿಯನ್ನು ಧೀರೇಂದ್ರ ರಾಘವ್ ಎಂದು ಗುರುತಿಸಲಾಗಿದೆ. ಈತ ಮುಸ್ಲಿಂ ಅವರ ಸಾಂಪ್ರದಾಯಿಕ ಉಡುಗೆ ತೊಟ್ಟು ಉಗ್ರರಂತೆ ನಟಿಸಿ ವಿಡಿಯೋ ಮಾಡಿದ್ದ. ಬಳಿಕ ಆತನನ್ನು ವಿಡಿಯೋ ಮಾಡಿದ್ದಕ್ಕಾಗಿ ಸ್ಥಳೀಯ ಪೊಲೀಸರು ಬಂಧಿಸಿದ್ದರು. ಇದೀಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಆರೋಪಿಯ ವಿರುದ್ಧ ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಆಗ್ರಾದ ಉಪ ಪೊಲೀಸ್ ಆಯುಕ್ತ ಸೂರಜ್ ಕುಮಾರ್ ರೈ ಅವರು, ವ್ಯಕ್ತಿಯೊಬ್ಬರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವಂತಹ ವಿಡಿಯೋ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ತಕ್ಷಣ ವಿಡಿಯೋ ಮಾಡಿದ್ದ ಆರೋಪಿಯನ್ನು ನ್ಯೂ ಆಗ್ರಾ ಪೊಲೀಸ್ ಠಾಣೆ ತಂಡವು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನಂತರ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವೈರಲ್ ಆದ ಈ ವಿಡಿಯೋದಲ್ಲಿ ಆರೋಪಿ ಧೀರೇಂದ್ರ ರಾಘವ್ ಮುಸ್ಲಿಂ ಅವರ ಸಾಂಪ್ರದಾಯಿಕ ಉಡುಗೆ ಧರಿಸಿ ಹಿಂದೂಗಳನ್ನು ನಿಂದಿಸುವ ಮೂಲಕ ಮುಸ್ಲಿಂ ಎಂದು ನಟಿಸುತ್ತಿದ್ದಾರೆ. ಆರೋಪಿಯು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುವ ಕೋಮುವಾದಿ ಹೇಳಿಕೆ ನೀಡಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.