ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಮಧ್ಯಂತರ ವ್ಯಾಪಾರ ಒಪ್ಪಂದದ (Interim Trade Deal) ಕುರಿತು ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ. ಈ ಒಪ್ಪಂದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಅಮೆರಿಕಕ್ಕೆ ಶರಣಾಗತಿ” ಎಂದು ಟೀಕಿಸಿದ್ದು, ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯರ ಹೇಳಿಕೆ ಟೀಕಿಸಿದ್ದು, ಇದು ಶರಣಾಗತಿಯಲ್ಲ. ಬಲಿಷ್ಠ ಭಾರತದ ಸಮಾನತೆಯ ಒಪ್ಪಂದ ಎಂದು ಬಣ್ಣಿಸಿದ್ದಾರೆ.
1960ರ ಆಹಾರದ ಅಭಾವ ಮತ್ತು 1991ರ ಆರ್ಥಿಕ ಬಿಕ್ಕಟ್ಟಿನ ಕಾಲಘಟ್ಟಕ್ಕೆ ಹೋಲಿಸಿದರೆ, ಇಂದಿನ ಭಾರತವು ವಿಶ್ವದ ಎಂಟನೇ ಅತಿದೊಡ್ಡ ಕೃಷಿ ರಫ್ತುದಾರ ರಾಷ್ಟ್ರವಾಗಿ ತನ್ನ ಹಿತಾಸಕ್ತಿಗಳನ್ನು ಬಲವಾಗಿ ರಕ್ಷಿಸಿಕೊಂಡಿದೆ ಎಂಬ ವಾದ ಕೇಳಿಬಂದಿದೆ.
ಐತಿಹಾಸಿಕ ಹಿನ್ನೆಲೆ: ಅಸಹಾಯಕತೆಯಿಂದ ಆತ್ಮವಿಶ್ವಾಸದವರೆಗೆ
ಹಿಂದಿನ ಕಾಲದ ಪರಿಸ್ಥಿತಿಯನ್ನು ಮೆಲುಕು ಹಾಕಿದರೆ, ಭಾರತವು ಅಮೆರಿಕದ ಮುಂದೆ ಮಣಿಯುವ ಅನಿವಾರ್ಯತೆ ಇತ್ತು. 1960ರ ಪಿಎಲ್-480 ಕಾಲ: ಅಂದು ಭಾರತವು ಆಹಾರಕ್ಕಾಗಿ ಅಮೆರಿಕದ ಮೇಲೆ ಸಂಪೂರ್ಣ ಅವಲಂಬಿತವಾಗಿತ್ತು. ಅಮೆರಿಕನ್ನರು ತಿನ್ನದ ಕಳಪೆ ಗುಣಮಟ್ಟದ ಗೋಧಿಯನ್ನು ಭಾರತ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು ಎಂದು ಹೇಳಿದ್ದಾರೆ.
1991ರ ಆರ್ಥಿಕ ಕುಸಿತ:
ದೇಶದ ಚಿನ್ನದ ಮೀಸಲು ನಿಧಿಯನ್ನು ವಿಮಾನದ ಮೂಲಕ ಸಾಗಿಸಿ ಅಡವಿಟ್ಟು ಸಾಲ ಪಡೆಯುವ ಅನಿವಾರ್ಯತೆ ಅಂದು ಎದುರಾಗಿತ್ತು. ಇದು ನಿಜವಾದ “ಒತ್ತಡದ ಮಾತುಕತೆ”ಯಾಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇಂದಿನ ಸ್ಥಿತಿ: ‘ಆತ್ಮನಿರ್ಭರ’ ಭಾರತದ ಬಲ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಆರ್ಥಿಕವಾಗಿ ಸದೃಢವಾಗಿದೆ: ಭಾರತ ಇಂದು ವಿಶ್ವದ 8ನೇ ಅತಿದೊಡ್ಡ ಕೃಷಿ ರಫ್ತುದಾರ ದೇಶ. ಅಮೆರಿಕವೇ ಇಂದು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಪ್ರಕಾರ, ದೇಶದ ರೈತರಿಗೆ ಹಾನಿಯಾಗುವ ಯಾವುದೇ ವಿಷಯವನ್ನು ಒಪ್ಪಂದದಲ್ಲಿ ಸೇರಿಸಿಲ್ಲ. ಡೈರಿ ಮತ್ತು ಸೂಕ್ಷ್ಮ ಕೃಷಿ ಕ್ಷೇತ್ರಗಳನ್ನು ಸುರಕ್ಷಿತವಾಗಿಡಲಾಗಿದೆ. ಭಾರತೀಯ ರಫ್ತುದಾರರಿಗೆ ಇದ್ದ ಶೇ. 25ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸಲು ಅಮೆರಿಕ ಒಪ್ಪಿದೆ, ಇದು ಭಾರತದ ರಾಜತಾಂತ್ರಿಕ ವಿಜಯ ಎಂದು ಬಣ್ಣಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ರಾಜಕೀಯ ಟೀಕೆಗಳು ಮತ್ತು ಸತ್ಯಾಸತ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಒಪ್ಪಂದವನ್ನು “ರೈತರ ಪಾಲಿನ ಮರಣಶಾಸನ” ಎಂದು ಕರೆದಿದ್ದಾರೆ. ಆದರೆ, ವಿಶ್ಲೇಷಕರ ಪ್ರಕಾರ ಇದು ಕೇವಲ ರಾಜಕೀಯ ಪ್ರೇರಿತ ಆರೋಪ. ಭಾರತವು ಈಗ ಸಹಾಯ ಯಾಚಿಸುವ ದೇಶವಲ್ಲ, ಬದಲಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ತೂಕ ಹೊಂದಿರುವ ಬಲಿಷ್ಠ ಪಾಲುದಾರನಾಗಿ ಮಾತುಕತೆ ನಡೆಸುತ್ತಿದೆ. ಸಿದ್ದರಾಮಯ್ಯ ಅವರ ಟೀಕೆಗಳು ದೇಶದ ಯಶಸ್ಸನ್ನು ಜೀರ್ಣಿಸಿಕೊಳ್ಳಲಾಗದ ರಾಜಕೀಯ ಹತಾಶೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.





Leave a comment