SUDDIKSHANA KANNADA NEWS/ DAVANAGERE/DATE:07_09_2025
ದಾವಣಗೆರೆ: ಗಣೇಶನ ಹಬ್ಬದ ನಂತರ ಗಣೇಶನ ಮೂರ್ತಿಯನ್ನು ಚರಂಡಿ, ಕೊಳಚೆ ನೀರಿನಲ್ಲಿ ವಿಸರ್ಜನೆ ಮಾಡುತ್ತಿ ರುವುದು ನೋವಿನ ಸಂಗತಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.
READ ALSO THIS STORY: ದಾವಣಗೆರೆ ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆ: ರಾಜಸ್ತಾನ ಮೂಲದ ಮೂವರು ಕಳ್ಳರ ಬಂಧನ, 15,37,800 ರೂ. ಮೌಲ್ಯದ ವಸ್ತು ವಶ!
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮದ ದಾಸೋಹಕ್ಕೆ ಭಕ್ತಾದಿಗಳಿಂದ ಭಕ್ತಿ ಸಮರ್ಪ ಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮೊದಲಿದ್ದ ನಮ್ಮ ಸಂಪ್ರದಾಯ ಗಳು ಬದಲಾಗಿವೆ. ಧಾರ್ಮಿಕ ನಂಬಿಕೆ ಗಳು ಮತ್ತು ಶ್ರದ್ಧೆಗಳು ವಿಚಾರಪೂರ್ಣ ವಾಗಿರಬೇಕು. ಪೂಜೆಗೆ ಶುದ್ಧ ನೀರನ್ನು ಬಳಸುವ ನಾವು, ವಿಸರ್ಜನೆಯ ಸಮಯದಲ್ಲಿ ಕೊಳಚೆ ನೀರನ್ನು ಬಳಸುವ ಬಗ್ಗೆ ಚಿಂತಿಸಬೇಕು ಎಂದರು.
ಹಿರಿಯ ಗುರುಗಳಾದ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಶರಣ ಸಾಹಿತ್ಯವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಬೇಕೆಂಬ ಆಶಯವನ್ನು ಹೊಂದಿದ್ದರು. ಅವರ ದೂರದೃಷ್ಟಿಗೆ ಅನುಗುಣವಾಗಿ ನಾವು ‘ಗಣಕ ವಚನ ಸಂಪುಟ’ವನ್ನು ಸಿದ್ಧಪಡಿಸಿದ್ದೇವೆ. ಈಗ ಬಸವಾದಿ ಶರಣರ 22 ಸಾವಿರ ವಚನಗಳು ಮೊಬೈಲ್ ಅಪ್ಲಿಕೇಷನ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಶಿವ ಶರಣರ ವಚನಗಳನ್ನು ಈಗಾಗಲೇ ಆಂಗ್ಲ, ತಮಿಳು ಮತ್ತು ಮರಾಠಿ ಭಾಷೆಗಳಿಗೂ ಅನುವಾದ ಮಾಡಲಾಗಿದೆ. ಹೀಬ್ರೂ, ಜರ್ಮನ್ ಮತ್ತು ರಷ್ಯನ್ ಭಾಷೆಗಳಿಗೂ ಭಾಷಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ದೊಡ್ಡ ಗುರುಗಳ ಆಶಯಕ್ಕೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿನ ಮಕ್ಕಳೇ ಕನ್ನಡ ಭಾಷೆ ಮಾತನಾಡುತ್ತಿಲ್ಲ. ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲ ಎಂದು ಹೆಮ್ಮೆ ಪಡುವ ಪೋಷಕರಿದ್ದಾರೆ. ಇದು ನಾಚಿಕೆಗೇಡು. ಇಂತವರಿಗಾಗಿ ವಚನಗಳನ್ನು ಓದಿ ಹೇಳುವ ವ್ಯವಸ್ಥೆಯನ್ನೂ ಮೊಬೈಲ್ ಅಪ್ಲಿಕೇಷನ್ ನಲ್ಲಿ ಮಾಡಲಾಗಿದೆ ಎಂದು ಹೇಳಿದರು.
ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಗಿಲ್ ಬೆನ್ ಹೆರಟ್ ಅವರು ಕನ್ನಡ ಸಾಹಿತ್ಯದ ಸೌಂದರ್ಯ ಮತ್ತು ಅದರ ಆಳವಾದ ಬೇರುಗಳ ಬಗ್ಗೆ ಮಾತನಾಡಿದರು.
ಕನ್ನಡ ಸಾಹಿತ್ಯವನ್ನು ‘ಅತ್ಯಂತ ಪ್ರಾಚೀನ, ಗಂಭೀರ ಮತ್ತು ಸೂಕ್ಷ್ಮ’ ಎಂದು ಬಣ್ಣಿಸಿದರು. 20 ವರ್ಷಗಳ ಹಿಂದೆ ಕನ್ನಡದ ಬಗ್ಗೆ ಆಸಕ್ತಿ ಬಂದಿದೆ. ಕಳೆದೊಂದು ವರ್ಷದಿಂದ ಭಾಷೆ ಕಲಿಯುತ್ತಿದ್ದೇನೆ ಎಂದರು.
ಶರಣರ ವಚನ ಸಾಹಿತ್ಯ ವಿಶ್ವದಲ್ಲಿಯೇ ವಿಶಿಷ್ಟವಾದ ವಿಚಾರಗಳನ್ನು ಹೊಂದಿದೆ. ವಚನಗಳ ಶ್ರೇಷ್ಠತೆಯನ್ನು ಜಗತ್ತಿಗೆ ತಲುಪಿಸುವಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಕೊಡುಗೆ ಅಪಾರವಾಗಿದೆ. ಅವರು ವಚನಗಳನ್ನು ಇತರೆ ಭಾಷೆಗಳಿಗೆ ಅನುವಾದಿಸುವ ಮೂಲಕ ಈ ಮಹತ್ವದ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.