SUDDIKSHANA KANNADA NEWS/ DAVANAGERE/ DATE:14-12-2023
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ವಿರುದ್ಧ ಇನ್ಮುಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮಗೂ ತಾಳ್ಮೆಯಿದೆ. ಅದನ್ನು ಪರೀಕ್ಷಿಸಬೇಡಿ. ಬೇರೆ ಪಕ್ಷದಲ್ಲಿದ್ದ ಯತ್ನಾಳ್, ಸೋಮಣ್ಣ ಕರೆತಂದ ಯಡಿಯೂರಪ್ಪರ ವಿರುದ್ಧ ಇವರಿಬ್ಬರೇ ಮಾತನಾಡುತ್ತಿರುವುದು. ಬಿಎಸ್ ವೈ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಗುಡುಗಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯತ್ನಾಳ್, ಸೋಮಣ್ಣ ಎಲ್ಲಿಯವರೆಗೂ ಬಿಎಸ್ ವೈ ಹಾಗೂ ಬಿವೈವಿ ವಿರುದ್ಧ ಮಾತನಾಡುತ್ತಾರೋ ಅಲ್ಲಿಯವರೆಗೆ ನಾವು ಮಾತನಾಡುತ್ತೇವೆ. ಸಹಿಸಲು ಆಗದು. ನಮಗೂ ತಾಳ್ಮೆ ಇದೆ. ಪ್ರತಿದಿನ ಇಬ್ಬರೂ ಮಾತನಾಡಿದರೆ ಯಡಿಯೂರಪ್ಪರ ತೂಕ ಕಡಿಮೆಯಾಗುತ್ತಾ? ಯಡಿಯೂರಪ್ಪರು ನಡೆದ ಹಾದಿಯ ಮಣ್ಣು ತೆಗೆದುಕೊಂಡು ಚಾಮರಾಜನಗರ, ಮೈಸೂರು ಜನರು ಹಣೆಗೆ ಇಟ್ಟುಕೊಳ್ಳುತ್ತಾರೆ. ಅಷ್ಟು ಹೋರಾಟದ ಮೂಲಕ ರಾಜಕಾರಣದಲ್ಲಿ ಮೇಲೆ ಬಂದು ಜನರಿಗಾಗಿ ಜೀವನಮುಡುಪಿಟ್ಟ ನಾಯಕ ಎಂದು ಹೇಳಿದರು.
ಯತ್ನಾಳ್, ಸೋಮಣ್ಣರ ಪಾಪದ ಕೊಡ ತುಂಬಿದೆ. ಅದಕ್ಕೆ ಸದ್ಯದಲ್ಲೇ ಅಂತ್ಯ ಆಗುತ್ತೆ ಎಂಬ ಕಾರಣಕ್ಕೆ ಯಡಿಯೂರಪ್ಪ, ವಿಜಯೇಂದ್ರರನ್ನು ಜರನ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ಟೀಕೆ ಮಾಡುವುದನ್ನು ಇನ್ಮುಂದೆ ಕೈ ಬಿಡಬೇಕು. ನಾವೆಲ್ಲರೂ ವಿಜಯೇಂದ್ರ ಅವರಿಗೆ ಸಾಥ್ ಕೊಡಬೇಕು. ಸಮಸ್ಯೆಗಳಿದ್ದರೆ ಹೈಕಮಾಂಡ್ ಬಳಿ ಹೇಳಿಕೊಳ್ಳಲಿ. ಇನ್ನು ಮುಂದಾದರೂ ತಿದ್ದಿಕೊಳ್ಳಲಿ. ಇಲ್ಲದಿದ್ದರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಯಾರೂ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಬಾರದು. ಇಂಥ ರಾಜಕೀಯ ಬಿಡಬೇಕು. ಸಭ್ಯ ರಾಜಕಾರಣಿಯಾಗಬೇಕು. ನಾನು ಜಾಸ್ತಿ ಮಾತನಾಡಬಾರದು. ಸಾರ್ವಜನಿಕರು ಗಮನಿಸುತ್ತಾರೆ. ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ನೈತಿಕ ಹಕ್ಕು ಎಲ್ಲಿದೆ. ಕಾಂಗ್ರೆಸ್ ನಲ್ಲಿ ಸೋಮಣ್ಣರಿಗೆ ರಾಜಕೀಯ ಸ್ಥಾನ ಮಾನ ಕೊಟ್ಟಿದ್ದರಾ? ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗ್ತಿದ್ದೆ, ರಾಜ್ಯಾಧ್ಯಕ್ಷರಾಗುತ್ತಿದ್ದೆ ಎನ್ನುವ ಭ್ರಮೆಯಲ್ಲಿದ್ದ ಸೋಮಣ್ಣ ಈಗ ಸುಳ್ಳು ಹೇಳುತ್ತಿದ್ದಾರೆ. ಇಂಥ ಚಾಕಚಾಕ್ಯತೆ ಅವರಿಗಿದೆ. ಯಡಿಯೂರಪ್ಪರು ಬಿಜೆಪಿಗೆ ಸೋಮಣ್ಣರನ್ನು ಕರೆ ತಂದರು. ನಮಗೆ
ಅನ್ಯಾಯವಾಗಿದೆ. ಸೋತರೂ ಸೋಮಣ್ಣರನ್ನು ಮಂತ್ರಿ ಮಾಡಿದರು. ಯತ್ನಾಳ್ ಜೆಡಿಎಸ್ ನಲ್ಲಿದ್ದರು. ಅವರನ್ನು ಬಿಜೆಪಿಗೆ ಕರೆತಂದಿದ್ದೇ ಯಡಿಯೂರಪ್ಪ ಅವರು. ಕೈ ಕಾಲು ಹಿಡಿದು ಬಿಜೆಪಿಗೆ ಬಂದವರು ಈಗ ಯಡಿಯೂರಪ್ಪರ ವಿರುದ್ಧವೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
2023ರ ವಿಧಾನಸಭೆ ಚುನಾವಣೆ ಸೋಲಿಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. 2017ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಮತ್ತೆ ರಾಜ್ಯ ಪ್ರವಾಸ ಮಾಡಿದರು. ಆಗಲೇ ಎಲ್ಲರೂ ಬೆಂಬಲ ಸೂಚಿಸಿದ್ದರೆ 130ಕ್ಕೂ ಹೆಚ್ಚು ಸ್ಥಾನಗಳನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತಿತ್ತು. ಪಕ್ಷ ಸಂಘಟನೆ ಮಾಡಲು ಕೆಲವರು ಸರಿಯಾಗಿ ಸಹಕರಿಸಲಿಲ್ಲ. ಯಡಿಯೂರಪ್ಪರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರು. ಸಂಘಟನೆ ಚತುರ ಅವರು. ಸ್ಕೂಟರ್, ಸೈಕಲ್ ನಲ್ಲಿ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದಾರೆ. ಯತ್ನಾಳ್ ಸೆರೆಮನೆ ವಾಸ ಅನುಭವಿಸಿದ್ದಾರಾ? ಸುವರ್ಣ
ಸೌಧದಲ್ಲಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ. ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಇಲ್ವಾ. ಸೋಮಣ್ಣ, ಯತ್ನಾಳ್ ಗೆ ಬಿಎಸ್ ವೈ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೇ ಇಲ್ಲ ಎಂದು ತಿಳಿಸಿದರು.