SUDDIKSHANA KANNADA NEWS/ DAVANAGERE/ DATE-01-07-2025
ದಾವಣಗೆರೆ: ಇಸ್ಲಾಂ ಧರ್ಮದಲ್ಲಿ ಬೇಕಾದಷ್ಟುಒಳಪಂಗಡಗಳಿವೆ. ಒಳಪಂಗಡಗಳನ್ನು ಇಸ್ಲಾಂ ಧರ್ಮದಲ್ಲಿ ಒಂದೆಡೆ ಸೇರಿಸಲಾಗಿದೆ. ಅದೇ ರೀತಿಯಲ್ಲಿ ವೀರಶೈವ ಲಿಂಗಾಯತ ಧರ್ಮದಲ್ಲಿರುವ ಎಲ್ಲಾ ಒಳಪಂಗಡಗಳು ವೀರಶೈವ ಲಿಂಗಾಯತ ಎಂದು ಪರಿಗಣನೆ ಮಾಡಿದರೆ ನಾವೇ ಪ್ರಥಮ ಸ್ಥಾನದಲ್ಲಿ ಇರಲು ಸಾಧ್ಯವಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
Read Also This Story: “ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತ ಸಮಾಜ ಛಿದ್ರಗೊಳಿಸುವ ಸಂಚು ಫಲಿಸದು”: ರಂಭಾಪುರಿ ಶ್ರೀ ಎಚ್ಚರಿಕೆ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವೀರಶೈವ ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳಿವೆ. ಇದ್ದರೂ ಸಹ ವೀರಶೈವ ಲಿಂಗಾಯತರ ಮೂಲವಾಹಿನಿಯಲ್ಲಿ ಬರಬೇಕೇ ಹೊರತು ಕವಲು ದಾರಿಯಲ್ಲಿ
ಹೋಗಬಾರದು ಎಂದು ಸಲಹೆ ನೀಡಿದರು.
ಹಾಗೇನಾದರೂ ಹೋದರೆ ಭವಿಷ್ಯ ಇಲ್ಲ ಎಂಬುದು ಒಳಪಂಗಡದ ಜನರಿಗೆ ಮನವರಿಕೆ ಆಗಿದೆ. ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿ ಮಾಡಲು ಅನುಮೋದನೆ ಕೊಟ್ಟಿದೆ. ಕೇಂದ್ರ ಸರ್ಕಾರ ಕೈಗೊಂಡ ಮರುಘಳಿಗೆಯಲ್ಲಿ ರಾಜ್ಯ ಸರ್ಕಾರವು ಸಹ ಮತ್ತೊಮ್ಮೆ ಸಾಮಾಜಿಕ ಸಮೀಕರಣ ಹಿನ್ನೆಲೆಯಲ್ಲಿ ಜಾತಿ ಗಣತಿ ಮಾಡುವ ನಿರ್ಧಾರಕ್ಕೆ ಬಂದಿದೆ. ಆದ್ರೆ, ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ರಾಜ್ಯ ಸರ್ಕಾರಕ್ಕೆ ಇಲ್ಲ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದರು.
ಅಖಿಲ ಭಾರತೀಯ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಸರ್ಕಾರದ ನಿರ್ಧಾರ ಬಹಿಷ್ಕರಿಸಿ, ಮಹಾಸಭಾದಿಂದಲೇ ಜಾತಿಗಣತಿ ಮಾಡುವ ನಿರ್ಧಾರ ಕೈಗೊಂಡರು. ಈ ನಿರ್ಧಾರವನ್ನು ಪಂಚಪೀಠಗಳು ಸ್ವಾಗತಿಸಿವೆ. ಈ ವಿಚಾರವಾಗಿ ಡಾ. ಶಾಮನೂರು ಶಿವಶಂಕರಪ್ಪ. ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿದೆ. 40 ವರ್ಷಗಳ ನಂತರದಲ್ಲಿ ನಡೆಯುವ ಈ ಶೃಂಗ ಸಮ್ಮೇಳನ ಎಲ್ಲರನ್ನೂ ನೋಡುವಂತೆ ಮಾಡಿದೆ. ಸಮಾಜಕ್ಕೆ ದಿಕ್ಸೂಚಿ ಆಗಬಲ್ಲದು ಎಂಬ ಆಶಾಭಾವನೆ ಪೀಠಾಚಾರ್ಯರಿಗೆ ಇದೆ. ಪೀಠ ಪರಂಪರೆಯಲ್ಲಿ ಬಂದ ಎಲ್ಲಾ ಸಮಾಜ ಬಾಂಧವರು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಶಾಮನೂರು ಶಿವಶಂಕರಪ್ಪ, ಶಂಕರ ಬಿದರಿ ಸೇರಿದಂತೆ ರಾಜಕೀಯ ನಾಯಕರನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಕುರಿತಂತೆ ಪಂಚಪೀಠಾಧ್ಯಕ್ಷರು ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಾಜಕಾರಣಿಗಳು ಹಾಗೂ ಸಮಾಜದ ಮುಖಂಡರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನು ಛಿದ್ರ ಮಾಡಿದರೆ ರಾಜಕೀಯವಾಗಿ ಹೆಚ್ಚು ಬಲಾಢ್ಯರಾಗಿ ಬೆಳೆಯಬಹುದು ಎಂಬ ಕಾರಣದಿಂದ ಕೆಲವು ರಾಜಕಾರಣಿಗಳು ವಿವಾದ ಹುಟ್ಟು ಹಾಕುತ್ತಿದ್ದಾರೆ. ಮುಂದೆಯೂ ಅವಕಾಶ ನೀಡಬಾರದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಜ್ಜೈನಿ, ಶ್ರೀಶೈಲ ಹಾಗೂ ಕಾಶಿ ಪೀಠದ ನೂತನ ಪೀಠಾಧಿಪತಿಗಳು, ಸಮಾಜದ ಮುಖಂಡರು ಹಾಜರಿದ್ದರು.