SUDDIKSHANA KANNADA NEWS/ DAVANAGERE/ DATE:31-12-2023
ದಾವಣಗೆರೆ: ಬಿಜಾಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಕೊರೊನಾ ವೇಳೆ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 40 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಯತ್ನಾಳ ಅವರು ಗಾಳಿಯಲ್ಲಿ ಗುಂಡು ಹೊಡೆಯಬಾರದು. ಕಾಂಗ್ರೆಸ್ ನ ಜೊತೆ ಹೊಂದಾಣಿಕೆ ಮಾಡಿಕೊಂಡು, ಬಿಜಾಪುರದಲ್ಲಿ ಕಾಂಗ್ರೆಸ್ ನ ಪ್ರಭಾವಿ ಜೊತೆಯೂ ಉತ್ತಮ ಬಾಂಧವ್ಯ ಹೊಂದಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಾನು ಸಿಂಪಲ್ ಆಗಿ ಹೇಳ್ತೀನಿ. ಯಾರಿಗೂ ಕೌಂಟರ್ ಕೊಡಲು ಹೋಗಲ್ಲ. ಕೌಂಟರ್ ಅಂತೂ ಅಲ್ವೇ ಅಲ್ಲ. 40 ಸಾವಿರ ಕೋಟಿ ರೂಪಾಯಿ ಅಂದರೆ ಸುಮ್ಮನೇನಾ. ಯಡಿಯೂರಪ್ಪ ಸಿಎಂ ಆಗಿದ್ದಾಗ 2 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಶಿಕ್ಷಣ, ಕಂದಾಯ, ಆರೋಗ್ಯ ಇಲಾಖೆಗೆ ತಲಾ 500 ಕೋಟಿ ರೂಪಾಯಿ ಅನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಡುಗಡೆ ಮಾಡಿದ್ದರು. ಅಧಿವೇಶನದಲ್ಲಿಯೇ ಕಾಂಗ್ರೆಸ್ ಆರೋಪಕ್ಕೆ ಉತ್ತರ ಕೊಡಲಾಗಿತ್ತು. ದಾಖಲೆಗಳ ಸಮೇತ ಬಿಡುಗಡೆ ಮಾಡಲಾಗಿದೆ. ಮಾಸ್ಕ್ ಗೆ ಎಷ್ಟು, ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್ ಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ಕೊಡಲಾಗಿದೆ. 40 ಸಾವಿರ ಕೋಟಿ ರೂಪಾಯಿ ಎಲ್ಲಾಗಿದೆ? ನೀವೇ ಶಾಸಕರಾಗಿದ್ದೀರಿ. ಅವತ್ತು ಯಾಕೆ ಚರ್ಚೆ ಮಾಡಲಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಹೇಳಿದರು.
ಯತ್ನಾಳ ಅವರು ಹಿರಿಯ ನಾಯಕರು. ಕೇಂದ್ರದಲ್ಲಿ ಸಚಿವರಾಗಿದ್ದವರು. ಕಾಂಗ್ರೆಸ್ ನ ಪ್ರಭಾವಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಆರೋಪ ಮಾಡಿದರೆ ಹೇಗೆ? ಎಂದು ಎಂ. ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.
40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಆಗಿದ್ದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಈ ವಿಚಾರದಲ್ಲಿ ಯತ್ನಾಳ ಅವರು ಸಾಬೀತುಪಡಿಸುತ್ತಾರಾ. ನಾನು ಸವಾಲು ಹಾಕುತ್ತೇನೆ ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಪ್ರತಾಪ್ ಸಿಂಹ ಸಹೋದರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ತುಘಲಕ್ ಸರ್ಕಾರ. ನಾನು 500 ಜನರನ್ನು ಪಾಸ್ ನೀಡಿ ಸದನಕ್ಕೆ ಕಳುಹಿಸಿದ್ದೇನೆ. ಪ್ರತಾಪ್ ಸಿಂಹ ಅವರನ್ನು ಏನು ಮಾಡಲಿಕ್ಕಾಗಲ್ಲ. ಜನರು ಬಿಜೆಪಿ ಪರವಾಗಿದ್ದಾರೆ. ಪ್ರತಾಪ್ ಸಿಂಹ ಮತ್ತೊಮ್ಮೆ ಗೆಲ್ಲುತ್ತಾರೆ. ಸಿಎಂ ಸಿದ್ದರಾಮಯ್ಯರು ಅವರ ಪುತ್ರನನ್ನು ಕಣಕ್ಕಿಳಿಸುವುದು ಅವರ ಪಕ್ಷಕ್ಕೆ ಸಂಬಂಧಿಸಿದ್ದು. ಈ ಬಗ್ಗೆ ನಾನು ಮಾತನಾಡಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದರು.