SUDDIKSHANA KANNADA NEWS/ DAVANAGERE/ DATE:23-02-2025
ಬೆಂಗಳೂರು: ನಾನು ರಾಜೀನಾಮೆ ಕೊಡೋಕೆ ರೆಡಿ ಇದ್ದೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೊಸ ದಾಳ ಉರುಳಿಸಿದ್ದಾರೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ ಎಂದಿದ್ದ ಪರಮೇಶ್ವರ್, ಈಗ ರಾಜೀನಾಮೆ ನೀಡುತ್ತೇನೆ ಎನ್ನುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ನೀವೆಲ್ಲರೂ ಸೇರಿ ನನ್ನ ರಾಜೀನಾಮೆ ಕೊಡಿ ಎಂದು ಕೇಳಿದ್ರೆ ನಾನು ಸಿದ್ಧನಿದ್ದೇನೆ. ನೀವು ದೊಡ್ಡ ಮನಸ್ಸು ಮಾಡಿ ಕೇಳಬೇಕು ಅಷ್ಟೇ ಎಂದು ಪರಮೇಶ್ವರ್ ಅವರು ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಮಾತು ಆಡಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಡಾ. ಜಿ. ಪರಮೇಶ್ವರ್ ಅವರ ಈ ಮಾತು ಹೊಸ ಚರ್ಚೆಗೂ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ಕಾವೇರಿದೆ. ಸಚಿವ ಸಂಪುಟಕ್ಕೆ ಮೇಸರ್ ಸರ್ಜರಿ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈ ನಡುವೆ ಪರಮೇಶ್ವರ್ ರಾಜೀನಾಮೆ ವಿಚಾರ ಯಾಕೆ ಮಾತನಾಡಿದರು? ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜೀನಾಮೆ ನೀಡಲು ಸಿದ್ದ ಎನ್ನುವ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಅವರ ಈ ಹೇಳಿಕೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿತು. ಕೊರಟಗೆರೆ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರದಲ್ಲಿದ್ದರೂ ನಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ನೋವು ತೋಡಿಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಡಾ. ಜಿ. ಪರಮೇಶ್ವರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ನೀಡುವುದು ಬೇಡ ಎಂದು ಘೋಷಣೆ ಹಾಕಿದರು.