ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆ ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಯಲ್ಲಿ ಆಳಂದ ತಾಲ್ಲೂಕಿನ ಮಠಗ ಗ್ರಾಮದ ಭಾಗ್ಯಶ್ರೀ ಶಿವಾಜಿ(23) ಎಂಬ ಮಹಿಳೆ ಮಂಗಳವಾರ ಮೃತಪಟ್ಟಿದ್ದು ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪತಿ ಶಿವಾಜಿ ವೈದ್ಯರ ವಿರುದ್ಧ ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಅಫಜಲಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ಕರ್ತವ್ಯಕ್ಕೆ ಗೈರಾದ ಕಾರಣ, ಅಲ್ಲಿನ ನರ್ಸ್ ಕೈಯಿಂದ ಹೆರಿಗೆ ಮಾಡಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದ ಪರಿಣಾಮ ಬಾಣಂತಿ ಭಾಗ್ಯಶ್ರೀ ಶಿವಾಜಿ ಸಾವನ್ನಪ್ಪಿದ್ದಾರೆ.
ಅಫಜಲಪುರದ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ ಭಾಗ್ಯಶ್ರೀ, ನಂತದ ಅತೀವ ರಕ್ತ ಸ್ರಾವವಾಗಿ ರಕ್ತದ ಒತ್ತಡ ಕುಸಿದಿದ್ದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಣಂತಿ ಭಾಗ್ಯಶ್ರೀ ಶಿವಾಜಿ ಮೃತಪಟ್ಟಿದ್ದಾರೆ. ಚಿಕಿತ್ಸಗೆ ಬಾಣಂತಿ ಸ್ಪಂದಿಸದ ಕಾರಣ ಮೃತಪಟ್ಟಿದ್ದಾರೆ ಇದರಲ್ಲಿ ವೈದ್ಯರ ನಿರ್ಲಕ್ಷವಿಲ್ಲ ಎಂದು ಜಿಲ್ಲಾ ಸರ್ಜನ್ ಡಾ. ರುಖೀಯ ಅಸನ ರಬ್ಬಾ ಹೇಳಿದ್ದಾರೆ.