SUDDIKSHANA KANNADA NEWS/ DAVANAGERE/ DATE:26-03-2024
ದಾವಣಗೆರೆ: ಬೆಣ್ಣೆನಗರಿ ಹೋಳಿ ಹಬ್ಬದ ಪ್ರಯುಕ್ತ ರಂಗು ರಂಗಾಗಿತ್ತು. ಎಲೆಲ್ಲೂ ಬಣ್ಣದೋಕುಳಿಯೇ. ಎತ್ತ ಕಣ್ಣಾಯಿಸಿದರೂ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ ಎನ್ನುತ್ತಲೇ ಓಡಾಡುತ್ತಿದ್ದವರೇ ಹೆಚ್ಚು. ಹಬ್ಬದ ರಂಗಂತೂ ಹೆಚ್ಚಾಗಿತ್ತು.
ದಾವಣಗೆರೆ ನಗರದಲ್ಲಿ ಸಂಚಾರ ನಿಯಮ ಪಾಲನೆ ಮಾಡದೇ ಇದ್ದ ದ್ವಿಚಕ್ರ ವಾಹನಗಳಿಗೆ ದಂಡ ಬಿದ್ದಿದೆ. ಪೊಲೀಸರು ಹೆಚ್ಚು ಶಬ್ಧ ಮಾಡುತ್ತಿದ್ದ ವಾಹನಗಳನ್ನು ಹಿಡಿದು ಫೈನ್ ಹಾಕಿದ್ದಾರೆ. ದಾವಣಗೆರೆ ಸಂಚಾರ ಪೊಲೀಸ್ ಇಲಾಖೆಯವರು ಎಸ್ಪಿ ಉಮಾ ಪ್ರಶಾಂತ್ ರ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು.
ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ:
ಎಲ್ಲರೂ ಬಣ್ಣ ಎರಚುತ್ತಾ ಹಬ್ಬ ಆಚರಿಸುತ್ತಿದ್ದರೆ, ಸಂಚಾರ ಪೊಲೀಸ್ ಇಲಾಖೆ ಸಿಬ್ಬಂದಿ ನಗರದಲ್ಲಿ ಕಾರ್ಯಾಚರಣೆ ನಡೆಸಿದರು. ಹೆಚ್ಚು ಶಬ್ದ ಮಾಡುವ ದ್ವಿಚಕ್ರ ವಾಹನ ಹಾಗೂ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು.
ಚಾಣಾಕ್ಷರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪೊಲೀಸರು:
ಅಂದ ಹಾಗೆ ಇವರೆಲ್ಲಾ ಸಿ ಸಿ ಕ್ಯಾಮರಾ ದಲ್ಲಿ ದಂಡ ಬಾರದಂತೆ ಹಾಗೂ ನಗರದಲ್ಲಿ ತಾವು ವೇಗವಾಗಿ ಹಾಗೂ ಅಡ್ಡಾ ದಿಡ್ಡಿ ಹೋದಾಗ ತಮ್ಮ ವಾಹನದ ನಂಬರ್ ಕಾಣಿಸಿದರೆ ದೂರು ನೀಡುತ್ತಾರೆ ಎಂದು ಪ್ಲೇಟ್ ಹಾಕಿರಲಿಲ್ಲ. ಅನೇಕ ಸಾರ್ವಜನಿಕರು ಸಹ ಇಲಾಖೆ ಗೆ ದೂರು ನೀಡಿದ್ದಾರೆ ಎಂಬ ಮಾಹಿತಿಯೂ ಇದೆ.
ಪ್ಲ್ಯಾನ್ ಹೇಗಿತ್ತು…?
ಶಾಲಾ, ಕಾಲೇಜು, ಹಾಸ್ಟೆಲ್ ಗಳಿಗೆ ಗೌಪ್ಯ ವಾಗಿ ಬಂದು ಅಂತಹ ವಾಹನಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಇಲಾಖೆ ಮುಂದಾಗಿತ್ತು. ತನ್ನದೇ ಆದ ಕಾರ್ಯವೈಖರಿ ಮೂಲಕ ದ್ವಿಚಕ್ರ ವಾಹನ ಮಾಲೀಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿತು.
ಪೊಲೀಸ್ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಗೇ ಕೂಲಿಂಗ್ ಪೇಪರ್, ಕರ್ಕಶ ಹಾರನ್ ಮಾಡುವ ಆಟೋಗಳ ಮೇಲೆಯೂ ಸಹ ಕ್ರಮ ವಹಿಸಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.
ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಣ್ಣೆನಗರಿ…!
ಮಿಂದೆದ್ದ ಜನರು: ಬಣ್ಣದೋಕುಳಿಯಲ್ಲಿ ಬೆಣ್ಣೆನಗರಿ ಮಂದಿ ಮಿಂದೆದ್ದರು. ಬೆಳಿಗ್ಗೆಯಿಂದಲೇ ಬಣ್ಣ ಎರಚುತ್ತಾ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಹೋಳಿ ಹಬ್ಬವೆಂದರೆ ಕೇವಲ ಬಣ್ಣದ ಎರಚಾಟ ಮಾತ್ರವಲ್ಲ, ಖುಷಿ, ಆನಂದತೆ, ಸುಖ, ಪ್ರೇಮ, ಶಾಂತಿ, ಪವಿತ್ರತೆ, ಮಧುರತೆ, ಸಹನಶೀಲತೆ ಹಾಗೂ ನಿರ್ಭಯತೆ ಎನ್ನುವ ಬಣ್ಣಗಳ ಗುಣಗಳನ್ನು ನಾವು ಮೈಗೂಡಿಸಿಕೊಳ್ಳಬೇಕೆನ್ನುವುದೇ ಹೋಳಿ ಹಬ್ಬದ ಪ್ರತೀಕ, ಇದಲ್ಲದೇ ನಮ್ಮಲ್ಲಿನ ದುಷ್ಟತೆಯನ್ನು ಹೋಗಲಾಡಿಸಿ, ಶಿಷ್ಟ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆನ್ನುವುದು. ಈ ರೀತಿಯಲ್ಲಿ ಹೋಳಿ ಆಚರಿಸಿದ್ದು ವಿಶೇಷ.
ನಗರದೆಲ್ಲೆಡೆ ಬಣ್ಣದಲ್ಲಿ ಮುಂದೆದ್ದ ಯುವ ಸಮೂಹ, ನಾಸಿಕ್ ಡೋಲ್ ಸದ್ದಿಗೆ ತಕ್ಕಂತೆ ಕುಣಿತ. ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ ಯುವಕ ಯುವತಿಯರು. ಚಿಣ್ಣರ ಕಿರುಚಾಟದ ಸಂಭ್ರಮ. ಇದೆಲ್ಲಾ ದಾವಣಗೆರೆಯ
ವಿವಿಧ ಬಡಾವಣೆ, ಮುಖ್ಯ ರಸ್ತೆಗಳಲ್ಲಿ ವೃತ್ತದಲ್ಲಿ ಕಂಡ ಬಂದ ದೃಶ್ಯಗಳು.
ಡ್ಯಾನ್ಸ್ ಡ್ಯಾನ್ಸ್…
ಇನ್ನೂ ಹೋಳಿ ಹಬ್ಬಕ್ಕೆ ಪ್ರತಿ ವರ್ಷ ಸೇರುವ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಯುವ ಸಮೂಹವೇ ಜಮಾವಣೆ ಆಗಿತ್ತು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವೃತ್ತದಲ್ಲಿ ಹಾಕಲಾಗಿದ್ದ ಡಿಜೆ ಸದ್ದಿಗೆ ಅಲ್ಲಿ ನೆರೆದಿದ್ದವರೆಲ್ಲಾ ಮೈಮರೆತು ಹೆಜ್ಜೆ ಹಾಕಿದರು.ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಪ್ರಮುಖ ಬೀದಿಗಳಲ್ಲಿ, ವೃತ್ತಗಳಲ್ಲಿ ಹೋಳಿ ಹಬ್ಬದ ಆಚರಣೆ ಜೋರಾಗಿತ್ತು. ಮಕ್ಕಳು, ಯುವಕ, ಯುವತಿಯರು, ಹಿರಿಯರು ಸೇರಿದಂತೆ ಎಲ್ಲರೂ ಬಣ್ಣ ಹಚ್ಚಿಕೊಂಡು, ತಮಟೆ ಮತ್ತು ಹಾಡಿಗೆ ಯುವ ಸಮೂಹ ಸಖತ್ ಹೆಜ್ಜೆ ಹಾಕಿದರು. ಬಣ್ಣದ ಹಬ್ಬ ಆಚರಿಸಿ ಎಲ್ಲರೂ ಖುಷಿ ಪಟ್ಟರು. ಪ್ರತಿ ಹಾಡಿಗೂ ಕೇಕೆ ಹಾಕುತ್ತಾ. ಬಣ್ಣ ಎರಚುತ್ತಾ ಡ್ಯಾನ್ಸ್ ಮಾಡಿದ ಯುವಕರು ನೆತ್ತಿ ಮೇಲೆ ಮೊಟ್ಟೆ ಕುಕ್ಕಿ ಸಂಭ್ರಮಿಸಿದರು.
ಮಸ್ತ್ ಮಸ್ತ್ ಹುಡ್ಗೀರ ನೃತ್ಯ:
ಯುವತಿಯರು ತಂಡ ಕಟ್ಟಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ದೃಶ್ಯ ಕಂಡುಬಂತು. ಒಟ್ಟಾರೆ ದಾವಣಗೆರೆಯ ಪ್ರಮುಖ ವೃತ್ತಗಳು ಜನಜಂಗುಳಿಯಿಂದ ತುಂಬಿಹೋಗಿದ್ದವು. ಹೋಳಿ ಎಂದರೆ ಬಣ್ಣಗಳ ಹಬ್ಬ ಅಲ್ಲವೇ. ಈ ನಿಟ್ಟಿನಲ್ಲಿ ಹಬ್ಬವನ್ನು ಬಣ್ಣ ಬಣ್ಣದ ಪುಡಿಗಳು ಮತ್ತು ನೀರಿನಿಂದ ತಯಾರಿಸಿ ಎರಚುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬತು, ಯುವತಿಯರು ಹಾಡುತ್ತಾ, ನೃತ್ಯಗಳೊಂದಿಗೆ ಹಬ್ಬದ ಸಡಗರದಲ್ಲಿದ್ದರು.
ಹೋಳಿಯಲ್ಲಿ ವಿವಿಧ ರೀತಿಯ ಬಣ್ಣಗಳನ್ನು ಬಳಸಲಾಗಿದ್ದು. ಒಣ ಬಣ್ಣಗಳನ್ನು ಪುಡಿ ರೂಪದಲ್ಲಿ ಪರಸ್ಪರ ಹಚ್ಚಿ ಸಂಭ್ರಮಿಸಿದರು. ಕೆಲವರಂತೂ ವಿಶೇಷವಾಗಿ ತರಕಾರಿ ಹಾಗೂ ಹಣ್ಣಿನಿಂದ ಪೇಸ್ಟ್ ತಯಾರಿಸಿ ಹರ್ಬಲ್ ಹೋಳಿ ಆಚರಿಸಿದ್ದು ವಿಶೇಷವಾಗಿತ್ತು. ಗುಂಪುಗುಂಪಾಗಿ ಜನರು ಹೋಳಿಯಲ್ಲಿ ಮೈ ಮರೆತಿದ್ದರು.