SUDDIKSHANA KANNADA NEWS/ DAVANAGERE/ DATE:16-12-2023
ದಾವಣಗೆರೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆ ಬೆಣ್ಣೆದೋಸೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಡಿ.23, 24 ಮತ್ತು 25 ರಂದು ದೋಸೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬೆಣ್ಣೆದೋಸೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಬೆಣ್ಣೆ ದೋಸೆ ಹೋಟೇಲ್ ಮಾಲೀಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೋತ್ಸವದ ಕುರಿತಂತೆ ಬೆಣ್ಣೆ ದೋಸೆ ಹೋಟೆಲ್ ಮಾಲೀಕರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.
ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ನೀಡುವ ಉದ್ದೇಶದಿಂದ ಡಿ.23, 24 ಮತ್ತು 25 ರಂದು ನಗರದ ಬಾಪೂಜಿ ಎಂಬಿಎ ಮೈದಾನ ಮತ್ತು ಗ್ಲಾಸ್ಹೌಸ್ ಮುಂಭಾಗದಲ್ಲಿ ದೋಸೋತ್ಸವವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 8 ರಿಂದ ದೋಸೋತ್ಸವ ಪ್ರಾರಂಭವಾಗಲಿದ್ದು, ಒಂದು ಬೆಣ್ಣೆ ದೋಸೆಗೆ ರೂ.60 ಹಾಗೂ 1 ಪ್ಲೇಟ್ ಖಾಲಿ ದೋಸೆಗೆ ರೂ.60 ನಿಗದಿಪಡಿಸಲಾಗಿದೆ. ದೋಸೆ ಅಂಗಡಿ ಮಾಲೀಕರು ಕಾರ್ಯಕ್ರಮದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಸುಲಭ ವಿಧಾನ ಅನುಸರಿಸಬೇಕು. ಟೋಕನ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
ಡಿ.23ರಿಂದ ಮೂರು ದಿನಗಳ ಕಾಲ ದಾವಣಗೆರೆ ಬೆಣ್ಣೆದೋಸೆ ಹಬ್ಬ: ಎಂಬಿಎ, ಗ್ಲಾಸ್ಹೌಸ್ನಲ್ಲಿ ದೋಸೋತ್ಸವ
ಡಿ.23, 24 ರಂದು ವೀರಶೈವ ಅಧೀವೇಶನವಿರುವುದರಿಂದ ಜನಸಂದಣೆ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ಅರೆಬರೆ ಬೇಯಿಸಿದ ದೋಸೆಗಳನ್ನು ನೀಡದೇ ಉತ್ತಮ ಗುಣಮಟ್ಟದ ಬೆಣ್ಣೆದೋಸೆಗಳನ್ನು ನೀಡಬೇಕು. ದೋಸೆ ಸ್ಟಾಲ್ಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿಗಳ ವ್ಯವಸ್ಥೆ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದರು.
ಹೋಟೆಲ್ ಮಾಲೀಕರು ತ್ಯಾಜ್ಯ ಪದಾರ್ಥಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡಬೇಕು. ದೋಸೆ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸಬಾರದು. ಸಂಬಂಧಿಸಿದ ಅಧಿಕಾರಿಗಳು ದೋಸೆಯ ಗುಣಮಟ್ಟ, ದೋಸೆಯ ರುಚಿ ತಪಸಾಣೆ ಸ್ಟಾಲ್ ಗಳ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮ ಮರಿಹಾಳ್, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಡಾ.ಎಂ.ಬಿ. ಅಶ್ವಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್ ಷಣ್ಮುಖಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.