SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ: ಹರಿಹರ ತಾಲೂಕಿನ ಹಳ್ಳಿಹಾಳ್ ಮಟ್ಟಿಕ್ಯಾಂಪ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿತನನ್ನು ಮಲೇಬೆನ್ನೂರು ಪೊಲೀಸರು ಸೆರೆ ಹಿಡಿದಿದ್ದಾರೆ.
ಅದೇ ಗ್ರಾಮದ ಎನ್. ಮಂಜುನಾಥ ಬಂಧಿತ ಆರೋಪಿ. ಬಂಧಿತನಿಂದ ಸುಮಾರು ರೂ 1,98,000 ಮೌಲ್ಯದ ಒಟ್ಟು 38 ಗ್ರಾಂ ತೂಕದ ಬಂಗಾರದ ಆಭರಣಗಳು, ಮತ್ತು 23500 ರೂ ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ್ದ 2,50,000 ರೂ ಬೆಲೆಬಾಳುವ ಕೆ.ಎ17ಎಎ3515 ನೇ ಟಾಟಾ ಕಂಪನಿಯ ಮಿನಿ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸೆಂಬರ್ 18ರ ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹರಿಹರ ತಾಲೂಕು ಹಳ್ಳಿಹಾಳ್ ಮಟ್ಟಿಕ್ಯಾಂಪ್ ಗ್ರಾಮದ ವಾಸಿ ಕವಿತಾ ಎಂಬುವವರು ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಈ ವೇಳೆ ಮನೆಯ ಹಿಂಬಾಗಿಲು ತೆರೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ ಒಟ್ಟು 80 ಗ್ರಾಂ ತೂಕ 4 ಲಕ್ಷ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು 40,000 ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ದೂರು ನೀಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ ಮತ್ತು ಜಿ. ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ರವರ ನೇತೃತ್ವದಲ್ಲಿ ಮಲೆಬೆನ್ನೂರು ಠಾಣೆಯ ಪಿಎಸ್ ಐ ಪ್ರಭು ಡಿ. ಕೆಳಗಿನಮನಿ, ಎಸ್.ಬಿ. ಚಿದಾನಂದಪ್ಪ ಹಾಗೂ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ರವರು ತನಿಖೆ ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಮಂಜುನಾಥ ಎನ್. ಎಂಬಾತನನ್ನು ವಿಚಾರಣೆ ಮಾಡಿದಾಗ ಕೃತ್ಯ ಎಸಗಿರುವುದು ದೃಢಪಟ್ಟಿದೆ.