ಬೆಂಗಳೂರು : ನೀವು ನಿಮ್ಮ ಮನೆ ಅಥವಾ ವಾಣಿಜ್ಯ ಕಟ್ಟಡ ಬಾಡಿಗೆ/ಲೀಜ್ಗೆ ಕೊಟ್ಟಿದ್ದೀರಾ..ಇಲ್ಲವೇ ಕೊಡಲು ಇಚ್ಚಿಸಿದರೆ ರಾಜ್ಯ ಪೊಲೀಸ್ ಇಲಾಖೆಯ ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಬಾಡಿಗೆ ಪಡೆಯುವವರ ಬಾಡಿಗೆದಾರರ ಸ್ವಂತ ಊರು ಪೂರ್ವಪರವನ್ನು ಮಾಲೀಕರು ತಿಳಿಯಬೇಕು. ಬಾಡಿಗೆದಾರರ ಆಧಾರ್ ಕಾರ್ಡ್, ಯಾವುದಾದರೂ ಸರ್ಕಾರಿ ಗುರಿತಿನ ಚೀಟಿ ಝೆರಾಕ್ಸ್ ಮತ್ತು ಮೊಬೈಲ್ ಸಂಖ್ಯೆಯನ್ನು ಮಾಲೀಕರು ಪಡೆದುಕೊಳ್ಳಬೇಕು.
ಬಾಡಿಗೆದಾರರು ಬಾಡಿಗೆ ಮನೆಯಲ್ಲಿ ಎಷ್ಟು ಜನ ಮತ್ತು ಯಾರು-ಯಾರು ವಾಸಿಸುತ್ತಾರೆ ಮತ್ತು ಅವರು ವಾಹಗಳನ್ನು ಬಳಸುತ್ತಿದ್ದಲ್ಲಿ ಆ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆಗಳ ಮಾಹಿತಿಯನ್ನು ಮಾಲೀಕರು ಇಟ್ಟುಕೊಳ್ಳಿ. ಬಾಡಿಗೆದಾರರು ಎಲ್ಲಿ ಮತ್ತು ಯಾವ ಕೆಲಸ ಮಾಡುತ್ತಾರೆ ಎಂಬುವುದರ ಕುರಿತು ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ಬಾಡಿಗೆದಾರರು ವಿದೇಶಿ ಪ್ರಜೆಯಾಗಿದ್ದಲ್ಲಿ ಅವರ ಪಾಸ್ಪೋರ್ಟ್, ವೀಸಾ ಅವಧಿ ಪರಿಶೀಲಿಸಿ ಝೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಈ ಕುರಿತು ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಬೇಕು ಎಂದು ಇಲಾಖೆ ತಿಳಿಸಿದೆ.
ವಾಣಿಜ್ಯ ಸ್ಥಳ ಬಾಡಿಗೆ ನೀಡಿದರೆ, ಬಾಡಿಗೆ ಪಡೆದವರು ಯಾವ ರೀತಿಯ ವ್ಯವಹಾರ ನಡೆಸುತ್ತಾರೆಂದು ತಿಳಿಯುವುದು ಅವಶ್ಯಕ. ಹೆಚ್ಚು ಬಾಡಿಗೆ ಹಣದ ಆಮಿಷಕ್ಕೆ ಒಳಗಾಗಿ ಬಾಡಿಗೆದಾರರ ಪೂರ್ವಪರ ವಿಚಾರಿಸದೇ ಬಾಡಿಗೆಗೆ ನೀಡಬಾರದು ಎಂದು ಪೊಲೀಸ್ ಇಲಾಕೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಬಾಡಿಗೆದಾರರ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಲೀಕರು ಬಾಡಿಗೆ ನೀಡಿದರೆ, ಮುಂದೆ ಬಾಡಿಗೆದಾರರಿಂದ ಯಾವುದೇ ಗಂಭೀರ ಸಮಸ್ಯೆಗಳು ಎದುರಾದಾಗ ಪೊಲೀಸರಿಗೆ ಮಾಹಿತಿ ನೀಡಿ ಅವರೊಂದಿಗೆ ಸಹಕರಿಸಬೇಕು. ಈ ಮೂಲಕ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಬಹುದು ಎಂದು ರಾಜ್ಯ ಪೊಲೀಸ್ ಇಲಾಖೆ ಹೇಳಿದೆ.