SUDDIKSHANA KANNADA NEWS/ DAVANAGERE/ DATE:14-05-2023
ದಾವಣಗೆರೆ (DAVANAGERE): ಹೊನ್ನಾಳಿ – ನ್ಯಾಮತಿ ತಾಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ರೇಣುಕಾಚಾರ್ಯರ ಹೊನ್ನಾಳಿಯಲ್ಲಿನ ಮನೆ ಮುಂದೆ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಣ್ಣೀರು ಸುರಿಸಿದ ರೇಣುಕಾಚಾರ್ಯ ಅವರು ಸೋಲು ಕಾಣುತ್ತಿದ್ದಂತೆ ಆಘಾತಕ್ಕೆ ಒಳಗಾದರು. ನಾನು ಯಾರಿಗೂ ದ್ರೋಹ, ಮೋಸ ಮಾಡಿಲ್ಲ. ಕೊರೊನಾ ವೇಳೆ ಜೀವ ಪಣಕ್ಕಿಟ್ಟು ಜನರ ಸೇವೆ ಮಾಡಿದ್ದೇನೆ. ಆದರೂ ಸೋತದ್ದು ಮನಸ್ಸಿಗೆ ತುಂಬಾ ಬೇಸರವಾಗಿದೆ ಎಂದು ಭಾವುಕರಾಗಿ ಹೇಳಿದರು.
ಮನೆ ಮುಂದೆ ಸೇರಿದ್ದ ನೂರಾರು ಬೆಂಬಲಿಗರು ರೇಣುಕಾಚಾರ್ಯ ಅವರಿಗೆ ಸಮಾಧಾನ ಮಾಡಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಕ್ಷೇತ್ರಾದ್ಯಂತ ಮನೆಮಗನಂತೆ ಓಡಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಶಾಸಕನಾಗಿ ಅಲ್ಲ, ನಿಮ್ಮ ಮನೆಯ ಸೇವಕನಾಗಿ ಕೆಲಸ ಮಾಡಿದರೂ ಫಲಿತಾಂಶ ಹೊರಬಂದಾಗ ಅಚ್ಚರಿ ಜೊತೆಗೆ ನೋವು ತಂದಿತು ಎಂದು ಹೇಳಿದರು.
ನನ್ನ ಬಗ್ಗೆ ನನಗೆ ಅಸಹ್ಯ ಎನಿಸುತ್ತಿದೆ. ಜನರಿಗಾಗಿ, ಜನರಿಗೋಸ್ಕರ ಹಗಲಿರುಳು ಶ್ರಮಿಸಿದ್ದೇನೆ. ಜನಾದೇಶಕ್ಕೆ ತಲೆ ಬಾಗುತ್ತೇನೆ. ಮುಂದೆ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಬೇಡ ಎಂದುಕೊಂಡಿದ್ದೇನೆ. ಚುನಾವಣೆಯ ಸಹವಾಸವೇ ಬೇಡ. ನಿಮ್ಮ ಸೇವಕನಾಗಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಅದರಲ್ಲಿ ತೃಪ್ತಿ ಕಾಣುತ್ತೇನೆ ಎನ್ನುತ್ತಿದ್ದಂತೆ ಬೆಂಬಲಿಗರು ಇಂಥ ನಿರ್ಧಾರ ಬೇಡ. ನಿಮ್ಮಂಥ ಸಾಮಾನ್ಯ ಶಾಸಕರು ಬೇಕು. ತಪ್ಪಾಗಿದೆ, ನೀವು ಇಂಥ ನಿರ್ಧಾರಕ್ಕೆ ಬರಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.
ಹಳ್ಳಿ ಹಳ್ಳಿಗಳಿಂದ ಬಂದ ಜನರು ರೇಣುಕಾಚಾರ್ಯ ಅವರ ಮನೆ ಮುಂದೆ ಬೆಳಿಗ್ಗೆಯಿಂದಲೇ ಜಮಾಯಿಸಿದರು. ಎಂ. ಪಿ. ರೇಣುಕಾಚಾರ್ಯ ಅವರು ಚುನಾವಣಾ ನಿವೃತ್ತಿ ಘೋಷಣೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದರು.
ಹೊನ್ನಾಳಿಯ ರೇಣುಕಾಚಾರ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿರುವ ನೂರಾರು ಕಾರ್ಯಕರ್ತರು ಚುನಾವಣಾ ನಿವೃತ್ತಿ ವಾಪಸ್ಸು ಪಡೆಯುವಂತೆ ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ, ಹೊನ್ನಾಳಿ ಹುಲಿ ಎಂ. ಪಿ. ರೇಣುಕಾಚಾರ್ಯರಿಗೆ ಜೈ, ಚುನಾವಣಾ ನಿವೃತ್ತಿ ವಾಪಸ್ ಪಡೆಯಲಿ ಎಂದು ಘೋಷಣೆ ಹಾಕಿದರು.
ಸಮಯ ಕೇಳಿದ ರೇಣುಕಾಚಾರ್ಯ:
ಒಬ್ಬ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಸೇವಕನಾಗಿ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡಿದ್ದೇನೆ, ಇನ್ನು ಏನನ್ನು ಮಾಡಬೇಕಿತ್ತು ಎನ್ನುವುದು ನನಗೆ ಅರ್ಥವಾಗಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ನನ್ನ ಮತ ಕ್ಷೇತ್ರದ ಜನತೆ ನೀಡಿದ ಜನಾದೇಶಕ್ಕೆ ತಲೆಬಾಗಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ಜನಸೇವೆ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಹೊನ್ನಾಳಿ ನಿವಾಸದ ಮುಂದೆ ಧರಣಿ ಕುಳಿತು, ರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದು, ಕೆಲ ದಿನಗಳ ಸಮಯಾವಕಾಶ ಕೇಳಿದ್ದೇನೆ ಎಂದು ತಿಳಿಸಿದರು.
ವಿಷ ಕುಡಿಯಲು ಯತ್ನ:
ಎಂ. ಪಿ. ರೇಣುಕಾಚಾರ್ಯರ ಮನೆ ಮುಂದೆ ಹೈಡ್ರಾಮಾವೇ ನಡೆದು ಹೋಯ್ತು. ರೇಣುಕಾಚಾರ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ವೇಳೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ವಿಷ ಕುಡಿಯಲು ಯತ್ನಿಸಿದ. ಈ ವೇಳೆ ಆತನಿಂದ ವಿಷದ ಬಾಟಲ್ ಕಸಿದುಕೊಂಡು ಅನಾಹುತವನ್ನು ಸ್ಥಳದವರು ತಪ್ಪಿಸಿದರು. ರೇಣುಕಾಚಾರ್ಯ ಅವರ ಮನೆಗೆ ಬಂದ ಮಹಿಳೆಯರು ಕಣ್ಣೀರು ಹಾಕಿದರು. ಮಾಜಿ ಶಾಸಕರು ಸಹ ಪದೇ ಪದೇ ಕಣ್ಣೀರು ಹಾಕುತ್ತಿದ್ದರು. ಬೆಂಬಲಿಗರು, ಅಭಿಮಾನಿಗಳು ಒತ್ತಾಯದ ವೇಳೆ ಕಣ್ಣಂಚಲ್ಲಿ ಬರುತ್ತಿದ್ದ ನೀರನ್ನು ಒರೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.