SUDDIKSHANA KANNADA NEWS/ DAVANAGERE/ DATE:12-03-2025
ಹೋಳಿ (Holi)ಯನ್ನು“ರಂಗಿನಹಬ್ಬ”,“ಬಣ್ಣಗಳಹಬ್ಬ”ಎಂದೇ ಬಿಂಬಿಸಲಾಗಿದೆ. ಬಾಲ್ಯದಿಂದಲೂ ಹೋಳಿಹಬ್ಬ ಎಂದಾಕ್ಷಣ ನೆನಪಾಗುವುದೇ ವಿವಿಧಬಗೆಯ ಬಣ್ಣಗಳ ಕಲರವ, ಕಾಮದಹನ, ವರ್ಣರಂಜಿತವಾದ ನೀರನ್ನು ತುಂಬಿದ ಪಿಚಕಾರಿಗಳು, ಮುಗಿಲುಮುಟ್ಟುವ ಸದ್ದು-ಗದ್ದಲದ ಸಂಭ್ರಮ. ವೈವಿಧ್ಯಮಯ ತಿಂಡಿತಿನಿಸುಗಳು…
ಹೀಗೆ ಸಂತೋಷದ ಸಂಭ್ರಮದಲ್ಲಿ ಜನರನ್ನು ಒಂದುಗೂಡಿಸುವ ಈ ಹಬ್ಬ ಭಾರತದಾದ್ಯಂತ ವಿಜೃಂಭಣೆಯಿಂದ ಆಚರಿಸುವ ಈಓಕುಳಿ ಹಬ್ಬಕ್ಕೆ ಮನಸೋಲದ ಮನಸ್ಸನ್ನು ಹುಡುಕುವುದೇ ಕಷ್ಟಕರ.
ನಮ್ಮ ಭಾರತದ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆ, ಸಂಪ್ರದಾಯಕ್ಕೂ ಅದರದ್ದೆ ಆದ ಇತಿಹಾಸ, ಮಹತ್ವ, ಧಾರ್ಮಿಕ ಹಿನ್ನೆಲೆ ಮತ್ತು ವೈಜ್ಞಾನಿಕ ಕಾರಣಗಳಿವೆ. ಅದರಂತೆ ನಮ್ಮ ನೆಚ್ಚಿನ ಹೋಳಿಹಬ್ಬವು ಹೊರತಾಗಿಲ್ಲ. ಹೋಳಿಯು ಪುರಾತನ ಭಾರತೀಯ ಪುರಾಣಗಳಲ್ಲಿ ಮತ್ತು ಪರಂಪರೆಯಲ್ಲಿ ಬೇರೂರಿದೆ. ಹೋಳಿ ಹಬ್ಬವನ್ನು ಪಾಲ್ಗುಣ ಮಾಸದ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವು ವಸಂತದ ಆಗಮನ ಹಾಗೂ ಅಧರ್ಮದ ವಿರುದ್ಧ ಧರ್ಮಕ್ಕೆ (ಕೆಟ್ಟದ್ದರ ವಿರುದ್ಧ ಒಳಿತಿಗೆ) ಸಿಕ್ಕಜಯವೆಂಬ ಪ್ರತೀತಿ ಇದೆ.
ಯಾವುದೇ ವಯಸ್ಸಿನ ಹಂಗಿರದ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ವಿವಿಧ ಬಣ್ಣಗಳಿಂದ ಸಂಭ್ರಮಿಸುವ ಓಕಳಿ ಹಬ್ಬದ ಸಂತೋಷದ ಕ್ಷಣಗಳನ್ನು ಬರಮಾಡುವ ಮೊದಲು ಕೃತಕ ಬಣ್ಣಗಳಲ್ಲಿ ಇರುವ ಹಾನಿಕಾರಕ ರಾಸಾಯನಿಕ ಅಂಶಗಳು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಇರಲಿ ನಮ್ಮೆಲ್ಲರ ಚಿತ್ತ.
ರಂಗು-ರಂಗಿನ ಹಬ್ಬ ಆಗಲಿ ಕೆಮಿಕಲ್ ರಹಿತ:
ಇಂದಿನದಿನಗಳಲ್ಲಿ ಹಾನಿಕಾರಕ ಕೆಮಿಕಲ್ಸ್ ಅನ್ನ ಕೆನ್ನಾಲಿಗೆಯನ್ನು ಎಲ್ಲೆಡೆ ಪಸರಿಸಿ ತನ್ನದೇ ಆದ ಅಸ್ತಿತ್ವ ಹೊಂದುತ್ತಿರುವುದು ವಿಷಾದನೀಯ ಸಂಗತಿ. ಹೋಳಿಯ ಬಣ್ಣಗಳಲ್ಲಿಯೂ ಕೂಡ ಇಂದು ಭಾರೀ ಪ್ರಮಾಣದ ವಿಷಪೂರಿತ ರಾಸಾಯನಿಕಗಳನ್ನು ಮಿಶ್ರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಲು ಗಾಜಿನ ಪುಡಿಯ ಪೌಡರ್ ಬಳಸಿ ಬಣ್ಣದ ಹೊಳಪು ಹೆಚ್ಚಿಸುತ್ತಿದ್ದಾರೆ.
ಸೀಸದ ಆಕ್ಸೈಡ್ (ಲೆಡ್ಆಕ್ಸೈಡ್):
ಕಪ್ಪು ಬಣ್ಣದಲ್ಲಿ ಕಂಡು ಬರುವ ಸೀಸದ ಆಕ್ಸೈಡ್ ಚರ್ಮದ ಅಲರ್ಜಿಮತ್ತು ನರಮಂಡಲದ ಹಾನಿ ಮಾಡಬಹುದು.
ಪಾದರಸದ ಸಲ್ಫೈಡ್(ಮರ್ಕ್ಯೂರಿಸಲ್ಫೈಡ್):
ಕೆಂಪು ಬಣ್ಣದಲ್ಲಿರುವ ಪಾದರಸದ ಸಲ್ಫೈಡ್ ಬಹಳವೇ ವಿಷಕಾರಿಯಾಗಿದ್ದು ಇದು ಕೇಂದ್ರೀಯ ನರ್ವಸಿಸ್ಟಂಗೆ (ಸೆಂಟ್ರಲ್ನರ್ವ್ಸಿಸ್ಟಮ್) ಪರಿಣಾಮ ಬೀರುತ್ತದೆ.
ಅಲುಮಿನಿಯಂಬ್ರೋಮೈಡ್:
ಬೆಳ್ಳಿಬಣ್ಣದಲ್ಲಿ ಬಳಕೆಯಾಗುವ ಅಲ್ಯೂಮಿನಿಯಂ ಶ್ವಾಸಕೋಶ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು.
ತಾಮ್ರದಸಲ್ಫೇಟ್(ಕಾಪರ್ಸಲ್ಫೇಟ್):
ಹಸಿರು ಬಣ್ಣದಲ್ಲಿರುವ ತಾಮ್ರ ಸಲ್ಫೇಟ್ಕಣ್ಣಿನ ಕಿರಿಕಿರಿ ಮತ್ತು ತಾತ್ಕಾಲಿಕ ಕುರುಡುತನ ಉಂಟು ಮಾಡಬಹುದು.
ಇಂತಹ ಅನೇಕ ಅಪಾಯಕಾರಿ ಅಂಶಗಳನ್ನೊಳಗೊಂಡ ಬಣ್ಣಗಳನ್ನು ಎರಚುವಾಗ ಬಣ್ಣವು ಗಾಳಿಯೊಂದಿಗೆ ಸೇರಿ ಗಾಳಿಯ ಗುಣಮಟ್ಟದಲ್ಲಿ ಏರು-ಪೇರಾಗಿ ಗಂಟಲು-ಕಣ್ಣುಗಳಿಗೆ ಕಿರಿಕಿರಿಉಂಟಾಗಿ ಉಸಿರಾಟದ ಸಮಸ್ಯೆ ಉಂಟಾಗಿ ಅಸ್ತಮಾ, ಅಲರ್ಜಿ, ಚರ್ಮರೋಗ ಹೀಗೆ ಒಟ್ಟಾರೆ ಮಾನವನ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಾ ಜೀವಕ್ಕೆ ಕುತ್ತು ತರುವ ಪರಿಸ್ಥಿತಿ ಎದುರಾಗುತ್ತದೆ.
ಅನೇಕ ಜನರು ಮೋಜು ಮಸ್ತಿಗಾಗಿ ಬಣ್ಣಗಳನ್ನು ಅನೇಕ ಪ್ರಾಣಿ-ಪಕ್ಷಿಗಳಿಗೆ, ಕೆರೆ- ನದಿಚಾನೆಲ್ಗಳಿಗೆ ಎರಚಿ ಸಂಭ್ರಮಿಸುವ ಪರಿ ಬೇಸರದಾಯಕವಾಗಿದೆ. ಮಾನವನ ಇಂತಹ ವರ್ತನೆಯಿಂದಾಗಿ ಎಷ್ಟೋ ಮೂಕಪ್ರಾಣಿಗಳ ಬದುಕು ಕುರುಡಾಗಿದೆ. ಅಲ್ಲದೆ ಜಲಸಂಪತ್ತು ಕಲುಷಿತಗೊಳ್ಳುತ್ತಿದೆ.
ಇದಲ್ಲದೆ ಬಣ್ಣಬಣ್ಣದ ನೀರಿನ ಬಲೂನ್ ತಯಾರಿಕೆಯಲ್ಲಿ ಉಪಯೋಗಿಸುವ “ಲ್ಯಾಟೆಕ್ಸ್” ತ್ಯಾಜ್ಯವಾಗಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ವಿಷಪೂರಿತ ರಾಸಾಯನಿಕ ಮಿಶ್ರಿತದಿಂದ ಮಣ್ಣಿನ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು ಮಣ್ಣು ಕೂಡ ಕಲುಷಿತಗೊಳ್ಳುತ್ತಿದೆ.
ಹೀಗೆ ನಾವು ಮಾಡುವ ಸಣ್ಣ ತಪ್ಪಿನಿಂದಾಗಿ ಇಡೀ ಪರಿಸರ ಹಾಗೂ ಮಾನವನ ಆರೋಗ್ಯ ಹದಗೆಟ್ಟು ಪ್ರತಿ ಜೀವಿಯ ಜೀವಕ್ಕೆ ಅಪಾಯ ತರುವ ಪರಿಸ್ಥಿತಿ ನಮ್ಮಿಂದಲೇನಾಂದಿಆಗುತ್ತಿರುವುದು ನಿಜಕ್ಕೂ ವಿಷಾದನೀಯ.
ಮೇಲೆ ತಿಳಿಸಿದ ವಿಷಯಗಳಿಂದಾಗಿ ಹೋಳಿ ಹಬ್ಬದ ಆಚರಣೆ “ನಿಷೇಧಮಾಡಿ ” ಎಂಬಉದ್ದೇಶ ಖಂಡಿತಾ ನಮ್ಮದಲ್ಲ. ಬದಲಾಗಿ ವಿಷಪೂರಿತ ಅಪಾಯಕಾರಿ ರಾಸಾಯನಿಕಗಳಿಂದ ತುಂಬಿದ ಹೋಳಿಬಣ್ಣಗಳನ್ನು ನಿಷೇಧಿಸಿ, ಒಂದು ಹೆಜ್ಜೆ ಮುಂದಕ್ಕೆ ಹೋಗಿ “ಪರಿಸರ-ಸ್ನೇಹಿ” ನೈಸರ್ಗಿಕ ಸಾವಯುವ ಬಣ್ಣಗಳನ್ನು ಬಳಸಿ ಮತ್ತು ಇತರರಿಗೂ ಬಳಸಲು ಪ್ರೇರೇಪಿಸಿ.
ಹೋಳಿ ಹಬ್ಬದ ಒಲವಿನ ಬಣ್ಣಗಳ ಆಯ್ಕೆಹೀಗಿರಲಿ:
– ಹೋಳಿ ಬಣ್ಣದ ಪ್ಯಾಕೆಟ್ ಖರೀದಿಸುವ ಮುನ್ನ ಅದರ ಇಂಗ್ರಿಡಿಯನ್ಸ್ (ಪದಾರ್ಥಗಳನ್ನು) ಪರಿಶೀಲಿಸಲು ಮರೆಯದಿರಿ.
– ನೀವು ಖರೀದಿಸುವ ಬಣ್ಣದ ಪ್ಯಾಕೆಟ್ ಗಳಲ್ಲಿ ವಿಷಕಾರಿಯಲ್ಲದ, ಕೃತಕ ಬಣ್ಣಗಳಿಲ್ಲದ ಯಾವುದೇ ಟಾಲ್ಕ್ಬಳಸಿಲ್ಲವೆಂಬ ಖಾತರಿ ಇರಲಿ.
ಬಣ್ಣವು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆಯೇ? ಬಳಸಲು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
– ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್ ಉತ್ಪನ್ನಗಳಿಗೆ ಆದ್ಯತೆನೀಡಿ.
– ಮನೆಯಲ್ಲಿಯೇ ಕೃಷಿ ಉತ್ಪನ್ನಗಳು, ಗಿಡಮೂಲಿಕೆಗಳು, ಅರಿಶಿಣ, ಆಹಾರ-ಬೆಳೆಗಳು, ಹಣ್ಣು ಮತ್ತು ತರಕಾರಿಗಳ ಸಾರದಿಂದ ತಯಾರಾದ ಸ್ವದೇಶಿ ಉತ್ಪನ್ನಗಳಿಗೆ ಕೈಜೋಡಿಸಿ.
ನೀವು ಬಾಳಿ ಹಾಗೂ ಇತರರಿಗೂ ಬಾಳಲು ಬಿಡಿ“ಎಂಬ ನುಡಿಮುತ್ತಿನಂತೆ ನಮ್ಮಿಂದ ಇತರರಿಗೆ, ಪ್ರಾಣಿ-ಪಕ್ಷಿ, ಜಲಸಂಪನ್ಮೂಲಗಳಿಗೆ, ಪರಿಸರಕ್ಕೆ ಹಾನಿಯಾಗದಂತೆ, ಹೋಳಿ ಹಬ್ಬದ ಪಾವಿತ್ರತೆಗೆ ಚ್ಯುತಿಬರದಂತೆ, ಅಪಾಯಕಾರಿ ಬಣ್ಣಗಳಿಂದ ಯಾರಬದುಕು ಮಾಸದಂತೆ ನೈಸರ್ಗಿಕ ಬಣ್ಣದ ಹೊಂಗಿರಣ ಎಲ್ಲೆಡೆಯೂ ಹಬ್ಬಿ ಸಕಲ ಜೀವರಾಶಿಗಳಲ್ಲೂ ಪ್ರೀತಿ, ಸಂತೋಷ, ನೆಮ್ಮದಿ, ಯಶಸ್ಸು ಎಂಬ ರಂಗು ಉತ್ತುಂಗಕ್ಕೇರಲಿ.
“ಪರಿಸರ-ಸ್ನೇಹಿ”ಜೀವನ ನಮ್ಮೆಲ್ಲರದ್ದಾಗಿರಲಿ ಎಂಬ ಭರವಸೆಯೊಂದಿಗೆ ಹೋಳಿಯ ಸಂಭ್ರಮವನ್ನು ಸ್ವಾಗತಿಸೋಣವೇ???

ಡಾ. ಪೂಜಿತಾ ಬಿ. ಎಸ್., ಸಹಾಯಕ ಪ್ರಾಧ್ಯಾಪಕಿ, ಜೈವಿಕ ತಂತ್ರಜ್ಞಾನ ವಿಭಾಗ ಜಿ.ಎಂ.ಐ.ಟಿ.ಕಾಲೇಜ್, ದಾವಣಗೆರೆ