SUDDIKSHANA KANNADA NEWS/ DAVANAGERE/ DATE:21-08-2023
ದಾವಣಗೆರೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಹಿಂದೂ ಜಾಗರಣ ವೇದಿಕೆ(Hindu Jagarana Vedike)ಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಬಂಧನ ವಿರೋಧಿಸಿ ದಾವಣಗೆರೆಯಲ್ಲಿ ಹಿಂದೂ ಜಾಗರಣ ವೇದಿಕೆ(Hindu Jagarana Vedike)ಯ ಕಾರ್ಯಕರ್ತರು, ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸುದ್ದಿಯನ್ನೂ ಓದಿ:
ಮುತ್ತಾತನಿಂದ ಮರಿ ಮೊಮ್ಮಗನವರೆಗೂ ಕಾಂಗ್ರೆಸ್‌ನ ಗರೀಬಿ ಹಠಾವೋ ಹಾಗೆಯೇ ಉಳಿದಿದೆ: ಬಿಜೆಪಿ ಟ್ವೀಟಾಸ್ತ್ರ
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಎಸಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. ಈ ವೇಳೆ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಮುಖಂಡರು, ಹಿಂದೂ ಜಾಗರಣ ವೇದಿಕೆ(Hindu Jagarana Vedike)ಯ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ, ಗೃಹ ಇಲಾಖೆ, ಸಿಎಂ ಸಿದ್ದರಾಮಯ್ಯರ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಿಂದೂ ಜಾಗರಣ ವೇದಿಕೆ(Hindu Jagarana Vedike)ಯು ಕಳೆದ ಅನೇಕ ವರ್ಷಗಳಿಂದ 1947 ರ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ನಡೆದ ಭಾರತ ವಿಭಜನೆಯ ಸತ್ಯ ಸಂಗತಿಗಳನ್ನು ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಇಂದಿನ ಯುವ ಸಮುದಾಯಕ್ಕೆ ನೆನಪಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 14 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆ(Hindu Jagarana Vedike)ಯ ಪ್ರಾಂತ ಸಹ ಸಂಯೋಜಕರಾದ ಸತೀಶ್ ದಾವಣಗೆರೆಯವರು ದಿಕ್ಸೂಚಿ ಭಾಷಣ ಮಾಡಿದ್ದರು. ಈ ದಿಕ್ಕೂಚಿ ಭಾಷಣದಲ್ಲಿ ಭಾರತದಲ್ಲಿ 1947ರ ಮಧ್ಯರಾತ್ರಿಯಲ್ಲಿ ನಡೆದ ಭಾರತದ ವಿಭಜನೆ ಮತ್ತು ವಿಭಜನೆಗೆ ಮೊದಲು ಈ ದೇಶದಲ್ಲಿ ಏನೇನು ಘಟನೆಗಳು ಘಟಿಸಿತ್ತು ಅನ್ನುವ ಸತ್ಯ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೇ ಅಪರಾಧ ಎಂದು ಪರಿಗಣಿಸಿ ಬಂಧಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಸ್ಥಳೀಯ ಪೊಲೀಸರು ನಿನ್ನೆ ರಾತ್ರಿ ಈ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದೀರಿ ಎಂದು ಸುಳ್ಳು ಆರೋಪ ಹೊರಿಸಿ ಐಪಿಸಿ ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಸುಮೊಟೋ ಕೇಸ್ ದಾಖಲಿಸಿ ನೊಟೀಸ್ ಕೂಡ ಜಾರಿ ಮಾಡದೇ ಗಂಭೀರ ಅಪರಾಧವೆಸಗಿದ ಆರೋಪಿಯನ್ನು ಬಂಧಿಸುವಂತೆ ಮಧ್ಯರಾತ್ರಿ ದಾವಣಗೆರೆಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸತೀಶ್ ಅವರನ್ನು ಬಂಧಿಸಲಾಗಿದೆ. ಈ ಕ್ರಮವನ್ನು ಹಿಂದೂ ಜಾಗರಣ ವೇದಿಕೆ (Hindu Jagarana Vedike) ಕರ್ನಾಟಕ ದಕ್ಷಿಣ ಪ್ರಾಂತವು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಮತ್ತು ಸಮಾಜದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಕೆಲಸವನ್ನು ಹಿಂದೂ ಜಾಗರಣಾ ವೇದಿಕೆ ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ. ಮುಂದೆಯೂ ನಡೆಸಿಕೊಂಡು ಹೋಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ಕೈಗನ್ನಡಿಯಾಗಿದೆ. ಸತ್ಯ ಸಂಗತಿಗಳನ್ನು ಮಾತನಾಡುವ ಸಾಮಾಜಿಕ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗಿಸುವ, ದಮನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯ ಸರ್ಕಾರವು ಹಿಂದೂ ಪರ ಹೋರಾಟ ನಡೆಸುವವರ ವಿರುದ್ಧ ಕ್ರಮಕ್ಕೆ ಮುಂದಾದರೆ ಹೋರಾಡುವ ಶಕ್ತಿ, ಸಾಮರ್ಥ್ಯ ಸಂಘಟನೆಗಿದೆ. ಕೂಡಲೇ ಸತೀಶ್ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು. ಈಗ ಹಾಕಿರುವ ಕೇಸ್ ಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೆಣಕಿದರೆ, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ತರದ ರೀತಿಯ ಸಮಸ್ಯೆಗಳನ್ನು ಹಿಂದೂ ವಿರೋಧಿಗಳು ಮಾಡಿದರ ಸಂಘಟನೆ ಒಂದು ಸಮಾಜವಾಗಿ ಉತ್ತರವನ್ನು ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಹಾಗಾಗಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಈ ಮೂಲಕ ನಿರ್ದೇಶನ ನೀಡಬೇಕು. ಇಂಥ ಪ್ರಕರಣಗಳನ್ನು ದಾಖಲಿಸುವುದಕ್ಕೆ ಅಂಕುಶ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್. ಟಿ. ವೀರೇಶ್, ಚೇತನ್ ಕನ್ನಡಿಗ, ಬಿಜೆಪಿ ಯುವ ಮುಖಂಡ ಗುರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.