SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: ಸಮಾಜ, ಆರೋಗ್ಯ ಸೇವೆ ಮಾಡುವುದು ರಾಜಕಾರಣಕ್ಕೋಸ್ಕರ. ಅಧಿಕಾರ ಇರಲಿ, ಇಲ್ಲದಿರಲಿ ಜನರ ಸೇವೆಯೇ ಮುಖ್ಯ ಎಂದು ಎಸ್. ಎಸ್. ಕೇರ್ ಟ್ರಸ್ಟ್ ನ ಆಜೀವ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ಹಾಗೂ ಎಸ್. ಎಸ್. ಹೈಟೆಕ್ ಆಸ್ಪತ್ರೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು
ಮಾತನಾಡಿದರು.
ದಾವಣಗೆರೆ ಜನರ ಆರೋಗ್ಯವೇ ನಮಗೆ ಮುಖ್ಯ. ರಾಜಕೀಯ ಉದ್ದೇಶಕ್ಕೋಸ್ಕರ ಈ ಕಾರ್ಯ ಮಾಡುತ್ತಿಲ್ಲ. 2019ರಿಂದಲೂ ಎಸ್. ಎಸ್. ಕೇರ್ ಟ್ರಸ್ಟ್ ನಿಂದ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದ್ರೆ, ಜನರ ಪ್ರೀತಿ, ವಿಶ್ವಾಸ ಮುಖ್ಯ ಎಂದರು.
ಡಯಾಬಿಟಿಸ್, ಬಿಪಿ, ಕ್ಯಾನ್ಸರ್ ಸೇರಿದಂತೆ ಹಲವು ರೀತಿಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜನರು ಆರೋಗ್ಯ ಕಾಪಾಡಿಕೊಂಡರೆ ಎಲ್ಲವೂ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಾರೆ. ಬಡವರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂಬ ಸದುದ್ದೇಶದಿಂದ ಉಚಿತ ತಪಾಸಣೆ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಬನ್ನಿ. ನಾವು ಸಹಾಯ ಮಾಡುತ್ತೇವೆ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ವಹಿಸಬಾರದು. ಈಗಲೇ ಪರೀಕ್ಷಿಸಿಕೊಂಡರೆ ಮುಂದೆ ಹೆಚ್ಚು ಹಣ ಖರ್ಚು ಮಾಡುವುದು ತಪ್ಪುತ್ತದೆ, ಯಾವುದೇ ಸಮಸ್ಯೆಗಳಾಗದಂತೆ ಎಚ್ಚರ ವಹಿಸಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಕ್ಯಾನ್ಸರ್ ಬಗ್ಗೆ ಅರಿವು ಹೊಂದುವ ಜೊತೆಗೆ ಜಾಗೃತಿ ವಹಿಸಬೇಕು ಎಂದು ಪ್ರಭಾ ಮಲ್ಲಿಕಾರ್ಜುನ್
ಅವರು ಹೇಳಿದರು.
ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಎಂಸಿಸಿ ಬಿ ಬ್ಲಾಕ್ ವಾರ್ಡ್ ನಲ್ಲಿ ಎರಡು ತಿಂಗಳಿಗೊಮ್ಮೆ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳು ಸೇರಿದಂತೆ ಜನರ ಅಭಿಪ್ರಾಯ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೊರೊನಾದಂಥ ಸಂಕಷ್ಟದ ಸಂದರ್ಭದಲ್ಲಿ ಎಸ್. ಎಸ್. ಕೇರ್ ಹಾಗೂ ಎಸ್. ಎಸ್. ಹೈಟೆಕ್ ಆಸ್ಪತ್ರೆಯ ವತಿಯಿಂದ ಲಸಿಕೆ ನೀಡುವ ಮೂಲಕ ಸಹಾಯ ಮಾಡಿದ್ದರು. ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಅವರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಇದಕ್ಕೆ ಜನರಿಂದಲೂ ಉತ್ತಮ ಸಹಕಾರ, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕಣ್ಣು ಸಮಸ್ಯೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜನರು ಇದರ ಸದುಪಯೋಗಪಡೆದುಕೊಳ್ಳುವಂತೆ ಗಡಿಗುಡಾಳ್ ಮಂಜುನಾಥ್ ಅವರು ಮನವಿ ಮಾಡಿದರು.
ಹೃದಯ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇಸಿಜಿ ತಪಾಸಣೆ, ಕಣ್ಣಿನ ಪರೀಕ್ಷೆ, ಸಂಪೂರ್ಣ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನಡೆಸಿದರು. 200ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಎಸ್ ಎಸ್ ಕೇರ್ ಟ್ರಸ್ಟ್ ನ ಹೆಲ್ತ್ ಕಾರ್ಡ್ ಅನ್ನು ವಿತರಣೆ ಮಾಡಿದರು. ಈ ವೇಳೆ ವಾರ್ಡ್ ನ ಪ್ರಮುಖರು ಹಾಜರಿದ್ದರು.