SUDDIKSHANA KANNADA NEWS/ DAVANAGERE/ DATE-06-05-2025
ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕರುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದೆ. ಖ್ಯಾತ ಬಾಲಿವುಡ್ ನಟ ಸೋನು ನಿಗಮ್ ಗೆ ಕನ್ನಡದಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದರು. ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದಕ್ಕೆ ಅದನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ್ದ ಖ್ಯಾತ ಗಾಯಕನ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಸಹಕಾರ ತೋರಲು ನಿರ್ಧರಿಸಿದೆ.
ಈ ಕಠಿಣ ಕ್ರಮ ತೆಗೆದುಕೊಂಡ ಬೆನ್ನಲ್ಲೇ ಸೋನು ನಿಗಮ್ ಇನ್ ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಕ್ಷಮೆಯನ್ನೂಯಾಚಿಸಿದ್ದಾರೆ. ಕ್ಷಮಿಸು ಕರ್ನಾಟಕ. ನಿನ್ನ ಮೇಲಿನ ಪ್ರೀತಿ ನನ್ನ ಸ್ವಪ್ರತಿಷ್ಠೆಗಿಂತ ದೊಡ್ಡದು. ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಹೇಳಿ ಕ್ಷಮೆಯಾಚಿಸಿದರೂ ಕನ್ನಡಿಗರ ಸಿಟ್ಟು ಕಡಿಮೆಯಾಗಿಲ್ಲ.
ಇನ್ನು ಮುಂದೆ ಯಾರೂ ಸೋನು ನಿಗಮ್ ಅವರನ್ನು ಹಾಡಲು ಕರೆಯಬಾರದು. ಸಂಗೀತ ಸಂಜೆ ಸೇರಿದಂತೆ ಯಾವುದೇ ಸಂಗೀತ ಚಟುವಟಿಕೆಗಳಲ್ಲಿ ಕರ್ನಾಟಕದಲ್ಲಿ ಭಾಗಿಯಾಗಲು ಅವಕಾಶ ನೀಡಬಾರದು. ಸಂಬಂಧಿಸಿದ ಎಲ್ಲರಿಗೂ ಮಂಡಳಿಯಿಂದ ಪತ್ರದ ಮೂಲಕ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋನು ನಿಗಮ್ ಗೆ ಕನ್ನಡದಲ್ಲಿ ಇನ್ನು ಮುಂದೆ ಮೊದಲಿದ್ದ ಪ್ರೀತಿ ಕನ್ನಡಿಗರು ತೋರುವುದು ಕಡಿಮೆ. ಯಾಕೆಂದರೆ ಈ ಹಿಂದೆಯೂ ಸೋನು ನಿಗಮ್ ಕೆಲವೊಂದು ಕಾರ್ಯಕ್ರಮಗಳಲ್ಲಿ ಉದ್ದಟತನ ಪ್ರದರ್ಶಿಸಿದ್ದರು.
ಅತ್ಯುತ್ತಮ ಗಾಯನ ಹೊಂದಿದ್ದರೂ ಕನ್ನಡಿಗರ ಮೇಲಿನ ಅಸಹನೆಯಿಂದಲೇ ಪಹಲ್ಗಾಮ್ ದಾಳಿಗೆ ಹೋಲಿಸಿದ್ದು ಎಂದು ಆರೋಪಿಸಲಾಗುತ್ತಿದೆ. ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸೋನು ನಿಗಮ್ ಹಾಡು ಹಾಡುವಾಗ ಕನ್ನಡ ಕನ್ನಡ ಎಂಬ ಘೋಷಣೆ ಕೇಳಿ ಬಂದಿತ್ತು. ಆಗ ಈ ರೀತಿ ಮಾಡಿದ್ದರಿಂದಲೇ ಪಹಲ್ಗಾಮ್ ಘಟನೆ ನಡೆದಿದೆ ಎಂದು ಹೇಳುವ ಮೂಲಕ ವಿವಾದದ ಬಿರುಗಾಳಿ ಎಬ್ಬಿಸಿದ್ದ ಗಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಂಡಿದೆ.