Home ದಾವಣಗೆರೆ ವರದಕ್ಷಿಣೆ ಪಿಡುಗಿಗೆ ಬ್ರೇಕ್: 1 ರೂಪಾಯಿಗೆ ಮಗನ ಮದುವೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾದ ತಂದೆ!
ದಾವಣಗೆರೆಬೆಂಗಳೂರು

ವರದಕ್ಷಿಣೆ ಪಿಡುಗಿಗೆ ಬ್ರೇಕ್: 1 ರೂಪಾಯಿಗೆ ಮಗನ ಮದುವೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾದ ತಂದೆ!

Share
ಮದುವೆ
Share

ಭಿವಾನಿ: ಹರಿಯಾಣದ ಭಿವಾನಿ ಜಿಲ್ಲೆಯ ಧನಾನಾ-II ಗ್ರಾಮದ ಸರ್ಪಂಚ್ ಒಬ್ಬರು ವರದಕ್ಷಿಣೆ ಪದ್ಧತಿಗೆ ವಿರೋಧವಾಗಿ ಮಾದರಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ವಧುವಿನ ಕುಟುಂಬದವರು ನೀಡಲು ಮುಂದಾಗಿದ್ದ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿಯ ಆಭರಣಗಳು ಹಾಗೂ 11 ಲಕ್ಷ ರೂಪಾಯಿ ನಗದನ್ನು ನಯವಾಗಿ ತಿರಸ್ಕರಿಸಿರುವ ಅವರು, ಕೇವಲ 1 ರೂಪಾಯಿ ಪಡೆದುಕೊಂಡು ತಮ್ಮ ಮಗನ ಮದುವೆ ನೆರವೇರಿಸುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ.

ಸರ್ಪಂಚ್ ವೇದ್‌ಪಾಲ್ ಜಂಗ್ರಾ ಅವರ ಮಗ ವಿಕಾಸ್ ಜಂಗ್ರಾ ಹಾಗೂ ಭಿವಾನಿ ನಗರದ ದೀಪಶ್ರೀ ಅವರ ವಿವಾಹ ನಿಶ್ಚಯವಾಗಿತ್ತು. ‘ಲಗನ್’ ಸಮಾರಂಭದ ವೇಳೆ ವಧುವಿನ ತಂದೆ ವೀರೆಂದ್ರ ನಾರಾಯಣ್ ಅವರು ಆಭರಣ ಹಾಗೂ ಹಣವನ್ನು ನೀಡಲು ಮುಂದಾದಾಗ ವರನ ಕುಟುಂಬ ಅದನ್ನು ಸ್ವೀಕರಿಸಲು ನಿರಾಕರಿಸಿತು.

ಹೆಣ್ಣು ಹೆತ್ತು ಸಾಕಿ-ಸಲಹಿದ ತಂದೆಗೆ ಮದುವೆ ಖರ್ಚಿನ ಜೊತೆ ವರದಕ್ಷಿಣೆಯ ಆರ್ಥಿಕ ಹೊರೆಸುವುದು ಸರಿಯಲ್ಲ ಎಂದು ವೇದ್‌ಪಾಲ್ ತಿಳಿಸಿದ್ದಾರೆ. ವಧುವಿನ ಕುಟುಂಬ ಈ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಸ್ಥಳೀಯ ಬಿಜೆಪಿ ಶಾಸಕ ಕಪೂರ್ ವಾಲ್ಮೀಕಿ ಕೂಡ ಸರ್ಪಂಚ್ ಅವರ ಈ ದಿಟ್ಟ ಹೆಜ್ಜೆಯನ್ನು ಕೊಂಡಾಡಿದ್ದಾರೆ.

ಲಕ್ಷಾಂತರ ರೂಪಾಯಿ ವರದಕ್ಷಿಣೆ ತಿರಸ್ಕಾರ: ವಧುವಿನ ಕಡೆಯವರು ನೀಡಲು ಬಂದಿದ್ದ 11 ಲಕ್ಷ ರೂ. ನಗದು ಹಾಗೂ ಲಕ್ಷಾಂತರ ಮೌಲ್ಯದ ಆಭರಣಗಳನ್ನು ವರನ ಕುಟುಂಬ ವಾಪಸ್ ಕಳುಹಿಸಿದೆ.

ಕೇವಲ 1 ರೂ. ಶಗುನ್ ಸ್ವೀಕಾರ: ಸಮಾಜಕ್ಕೆ ವರದಕ್ಷಿಣೆ ಪಿಡುಗಿನ ವಿರುದ್ಧ ಸಂದೇಶ ಸಾರಲು ಸರ್ಪಂಚ್ ವೇದ್‌ಪಾಲ್ ಜಂಗ್ರಾ ಕೇವಲ 1 ರೂಪಾಯಿ ಪಡೆದು ಮದುವೆ ಒಪ್ಪಿಕೊಂಡಿದ್ದಾರೆ.

ಪ್ರಶಂಸೆ ವ್ಯಕ್ತಪಡಿಸಿದ ಗಣ್ಯರು: ಹೆಣ್ಣು ಕೊಟ್ಟ ತಂದೆಯ ನೋವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ ಸರ್ಪಂಚ್ ಅವರ ನಿರ್ಧಾರಕ್ಕೆ ಸ್ಥಳೀಯರಿಂದ ಹಾಗೂ ಶಾಸಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಶಿಷ್ಟ ವಿವಾಹವು ಇಂದಿನ ಸಮಾಜದಲ್ಲಿ ವರದಕ್ಷಿಣೆ ನಿಷೇಧದ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿದೆ.

Share