SUDDIKSHANA KANNADA NEWS| DAVANAGERE| DATE:29-05-2023
ದಾವಣಗೆರೆ(DAVANAGERE): ದಾವಣಗೆರೆ ತಾಲೂಕಿನ ತೋಳಹುಣಸೆಯಲ್ಲಿ ಮೇಲ್ಸೇತುವೆಯಿಂದ ಹಾರಿ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವಿನ ಪ್ರಕರಣ ಸಂಬಂಧ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ. ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.
ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ಪಿಎಸ್ ಐ ಹಾಗೂ ಒಬ್ಬ ಕಾನ್ ಸ್ಟೇಬಲ್ ಅಮಾನತು ಮಾಡಲಾಗಿದ್ದು, ಇಂದು ಪ್ರಕರಣವನ್ನು ಸಿಐಡಿ ಕೈಗೆತ್ತಿಕೊಂಡಿದೆ. ಡಿವೈಎಸ್ಪಿ ನೇತೃತ್ವದ ಸಿಐಡಿಯ ನಾಲ್ವರ ಸದಸ್ಯರ ತಂಡ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದೆ. ತನಿಖೆ ಚುರುಕುಗೊಳಿಸಿದ್ದು, ಸಾಕ್ಷ್ಯಾಧಾರ ಕಲೆಹಾಕುವಲ್ಲಿ ನಿರತವಾಗಿದೆ.
ದಾವಣಗೆರೆ ತಾಲೂಕಿನ ತೋಳಹುಣಸೆಯಲ್ಲಿ ಮೇಲ್ಸೇತುವೆಯಿಂದ ಜಿಗಿದು ಸರ್ವೀಸ್ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಸಾವಿನ ಸುತ್ತ ಹಲವು ಅನುಮಾನದ ಹುತ್ತವೂ ಬೆಳೆಯಲಾರಂಭಿಸಿತ್ತು. ಈ ಪ್ರಕರಣ ಸಿಐಡಿ ತನಿಖೆಗೆ ವಹಿಸುವ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದ್ದರು. ಇಂದು ಸಿಐಡಿ ಅಧಿಕಾರಿಗಳ ತಂಡ ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಆದ್ರೆ, ಪೊಲೀಸರು ತೋಳಹುಣಸೆ ಬಳಿ ಯಾಕೆ ಕಾರು ನಿಲ್ಲಿಸಿದರು? ಹರೀಶ್ ಹಳ್ಳಿಯೇ ಕಾರಿನ ಡೋರು ತೆಗೆದು ಕೆಳಗಿಳಿದು ಜಿಗಿದರಾ? ಆಯಾ ತಪ್ಪಿ ಬಿದ್ದರಾ? ಇಲ್ಲವೇ ಬೇರೆ ಏನಾದ್ರೂ ನಡೆದಿದೆಯಾ? ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿರುವ ತಂಡವು, ಮೂತ್ರ ವಿಸರ್ಜನೆ ಮಾಡಲು ಹರೀಶ್ ಹೇಳಿ ಕಾರಿನಿಂದ ಇಳಿದರಾ? ಮೊದಲೇ ಯೋಜನೆ ಏನಾದರೂ ಹಾಕಿಕೊಳ್ಳಲಾಗಿತ್ತಾ ಎಂಬ ಅನುಮಾನದ ಕುರಿತ ಆಯಾಮದಲ್ಲಿಯೂ ತನಿಖೆ ಮುಂದುವರಿದಿದೆ.
ಹರೀಶ್ ಹಳ್ಳಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದವರು. ಆರ್ ಟಿ ಐ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಹರೀಶ್ ಹಳ್ಳಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಹರೀಶ್ ಹಳ್ಳಿ ಬೆಳೆದಿದ್ದು ಕೆಲವರ ಕಣ್ಣು ಕೆಂಪಾಗಾಗಿಸಿತ್ತು. 2023 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚನ್ನಗಿರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಸೋತರೂ ಕೆಲವರಿಗೆ ಪರಿಚಿತನಾಗಿದ್ದ.
ನಕಲಿ ದಾಖಲೆ ಸೃಷ್ಠಿಸಿ ಆಸ್ತಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಲಾಗಿತ್ತು. ಪ್ರಕರಣ ಸಂಬಂಧ ಐವರ ವಿರುದ್ಧ ಆಸ್ತಿ ಮಾಲೀಕ ಕೆ. ಬಾಬುರಾವ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರಂತೆ ಎಫ್ ಐ ಆರ್ ಕೂಡ ದಾಖಲಾಗಿತ್ತು. ಆವರಗೆರೆ ಗ್ರಾಮದ ಸ.ನಂ 240/ 2ಬಿ ರಲ್ಲಿ ಅಲಿನೇಷನ್ ಆಗಿ ಡೋರ್ ನಂಬರ್ ಆಗಿರುವ 3 ನಿವೇಶನಗಳ ಕ್ರಯ ಕರಾರು ಪತ್ರ ನೊಂದಣಿಯನ್ನು 2005 ಮಾರ್ಚ್ 7 ರಲ್ಲಿ ನನ್ನ ಪತ್ನಿ ಜಯಶ್ರೀ ಅವರ ಹೆಸರಿಗೆ ಕ್ರಯಖಾತೆ ಪಡೆದಿದ್ದೆ. ಆದರೆ ಇತ್ತೀಚೆಗೆ ಹೆಚ್. ಆರ್ ಹರೀಶ್ ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ. ಅಲ್ಲದೇ ಯಾವುದೋ ಮಹಿಳೆಯೊಬ್ಬರಿಂದ ನಕಲಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೇ, ಹಿರಿಯ ಉಪನೋಂದಣಾಧಿಕಾರಿಗಳು ಕೂಡ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸದೇ ಹರೀಶ್ ಎಂಬಾತನ ಜೊತೆ ಶಾಮೀಲಾಗಿ ಅಕ್ರಮ ಕ್ರಯದ ಕರಾರು ಪತ್ರ ನೊಂದಣಿ ಮಾಡಿದ್ದಾರೆ.ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಈ ಬಗ್ಗೆ ಹರೀಶ್ ಸೇರಿದಂತೆ ಐದು ಮಂದಿ ಮೇಲೆ ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮಗೆ ಆದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಎಂದು ನ್ಯಾಯ ಕೇಳಿ ಬಂದಿದ್ದೇವೆ ಎಂದಿದ್ದರು.
ಹರೀಶ್ ಪತ್ನಿ ಕೊಟ್ಟಿರುವ ದೂರಿನಲ್ಲೇನಿತ್ತು…?
ಹರೀಶ್ ಸಾವಿನ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆ ದಾವಣಗೆರೆ ಗ್ರಾಮೀಣ ಠಾಣಾ ಪೊಲೀಸ್ ಠಾಣೆಗೆ ಮೃತನ ಪತ್ನಿ ದೂರು ಕೊಟ್ಟಿದ್ದರು. ಮೇ.28ರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಕೃಷ್ಣಪ್ಪ, ಪಿಸಿಯಾದ ದೇವರಾಜ, ಚಾಲಕ ಇರ್ಷಾದ್ ಅವರು ನಮ್ಮ ಕಾಕನೂರಿನ ಮನೆಗೆ ಬಂದು ನನ್ನ ಗಂಡನನ್ನು ದೌರ್ಜನ್ಯದಿಂದ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬೆಳಗಿನ ಜಾವ 4.30ಕ್ಕೆ ಫೋನ್ ಮಾಡಿ ನಿಮ್ಮ ಗಂಡನಿಗೆ ಆಸ್ಪತ್ರೆಗೆ ಸೇರಿಸಿದ್ದೇವೆ. ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು. ನನ್ನ ಗಂಡನ ಸಾವಿಗೆ (ಕೊಲೆಗೆ) ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಕೃಷ್ಣಪ್ಪ, ದೇವರಾಜ್, ಇರ್ಷಾದ್ ಅವರೇ ನೇರ ಕಾರಣ. ದಯಮಾಡಿ ನನ್ನ ಗಂಡನ ಸಾವಿಗೆ ನ್ಯಾಯ ಒದಗಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಕೊಲೆಯ ಹಿಂದೆ ಕೆ. ಬಾಬುರಾವ್ ಕಣಿವೆಬಿಳಚಿ ಇವರ ಕೈವಾಡವಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಹರೀಶ್ ಪತ್ನಿ ಕೊಟ್ಟ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್ಐ ಕೃಷ್ಣಪ್ಪ, ದೇವರಾಜ್, ಇರ್ಷಾದ್, ಬಾಬು ರಾವ್ ಅವರ ವಿರುದ್ಧ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪ್ರಕಾರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಕ್ರಮ
ಜರುಗಿಸಲಾಗುವುದು. ಪೊಲೀಸರ ವಶದಲ್ಲಿ ಸಾವನ್ನಪ್ಪಿರುವ ಕಾರಣ ಸಿಐಡಿಗೆ ಪ್ರಕರಣ ಒಪ್ಪಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗ ಅಮಾನತು ಮಾಡಲಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ತಿಳಿಸಿದ್ದಾರೆ.
ಹರೀಶ್ ವಿರುದ್ಧ ಪೋರ್ಜರಿ ಕೇಸ್ ದಾಖಲಾಗಿತ್ತು. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ ಮಾಡಲಾಗಿದೆ ಎಂಬ ಆರೋಪ ಹರೀಶ್ ಅವರ ಮೇಲಿತ್ತು. ಕೇಸ್ ಸಂಬಂಧ ಗಾಂಧಿನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಹರೀಶ್ ನನ್ನು ಕರೆದುಕೊಂಡು ಬರುವ ದಾರಿಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೋಳಹುಣಸೆ ಬಳಿ ವಾಹನದೊಳಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಲ್ಲಿಯೇ ಇದ್ದ ಓವರ್ ಬ್ರಿಡ್ಜ್ ನಿಂದ ಜಿಗಿದ. ಆ ಬಳಿಕ ಸರ್ವೀಸ್ ರಸ್ತೆಗೆ ಬಿದ್ದಿದ್ದಾನೆ. ಆ ಬಳಿಕ ಪೊಲೀಸರು ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಆತನನ್ನು ದಾವಣಗೆರೆಯ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದ. ಉಳಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.