SUDDIKSHANA KANNADA NEWS/ DAVANAGERE/ DATE:08-08-2023
ದಾವಣಗೆರೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ದಾವಣಗೆರೆಯಲ್ಲಿ ನಡೆದ ಗೃಹಜ್ಯೋತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೇಳಿದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಒಬ್ಬ ಐಎಎಸ್ ಅಧಿಕಾರಿಯಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಬೀಳಗಿಗೆ ನಾಚಿಕೆಯಾಗಬೇಕು ಎಂದು ಹರಿಹರ (Harihara) ಬಿಜೆಪಿ ಶಾಸಕ ಬೆಂಕಿಯುಗುಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ್ ಬೀಳಗಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದವರು. ಅದೇ ರೀತಿಯಲ್ಲಿ ಈಗ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದಾರೆ. ಗೌರವಯುತ ಸ್ಥಾನದ ಅಧಿಕಾರಿ. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುವಾಗ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದರು.
ಆದ್ರೆ, ನೀವು ಹೇಳಿದಂತೆ ಕೇಳುತ್ತೇವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಕೈ ಮುಗಿದು ಮನವಿ ಮಾಡಿದ್ದು ಸರಿಯಲ್ಲ ಎಂದು ಛೇಡಿಸಿದ ಅವರು, ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬರಲಿಲ್ಲ. ಇದು ಮನಸ್ಸಿಗೆ ಬೇಸರ ತರಿಸಿತು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆಯಲ್ಲಿ ಗೃಹ ಜ್ಯೋತಿ ಯೋಜನೆ ಚಾಲನೆ ವೇಳೆ ಗದ್ದಲ, ಗೊಂದಲ, ರಾದ್ಧಾಂತ… ಯಾಕಾಗಿ…?
ಇನ್ನು ಮಾಯಕೊಂಡ ಶಾಸಕ ಬಸವಂತಪ್ಪ ಅವರು ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಕೊನೆಯಲ್ಲಿ ಕಾಂಗ್ರೆಸ್ ಗೆ ಜೈ ಎಂದರು. ಇದು ಸರ್ಕಾರಿ ಕಾರ್ಯಕ್ರಮ. ಕೊನೆಯಲ್ಲಿ ತಮ್ಮ ತಪ್ಪು ಸರಿಪಡಿಸಿಕೊಂಡು ತಪ್ಪಾಗಿ ಹೇಳಿದೆ ಎಂದು ಹೇಳುವ ಮೂಲಕ ಸಬೂಬು ನೀಡಿದರು. ಆದ್ರೆ, ಮಹಾಂತೇಶ್ ಬೀಳಗಿ ಅವರು ಮಾತನಾಡಿದ್ದು ಯಾವ ಮಾಧ್ಯಮದಲ್ಲಿಯೂ ಸುದ್ದಿ ಬರಲೇ ಇಲ್ಲ. ಅಧಿಕಾರದಲ್ಲಿದ್ದವರು ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸ ಮಾಧ್ಯಮಗಳು ಮಾಡಬೇಕು. ಇದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಅಕ್ರಮ ತನಿಖೆಯಾಗಲಿ:
ಇನ್ನು ಕೋವಿಡ್ ವೇಳೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪದೇ ಪದೇ ಹೇಳುತ್ತಿದ್ದಾರೆ. ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಲಿ. ನಾವು ಬೆಂಬಲಿಸುತ್ತೇವೆ. ಆದ್ರೆ, ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಸಚಿವರೇ ಹೇಳಿರುವಂತೆ ತನಿಖೆ ಮಾಡಿಸಿ ಅಕ್ರಮ ಬಯಲಿಗೆಳೆಯಲಿ. ಅದೇ ರೀತಿಯಲ್ಲಿ ಕೋವಿಡ್ ಅಕ್ರಮ ತನಿಖೆ ಮಾಡದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ
ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಬೇಸರ ತಂದಿದೆ:
ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ತೋರಿದ ವರ್ತನೆ ಬೇಸರ ತರಿಸಿದೆ. ನಾನು ಆಹ್ವಾನ ನೀಡಿದ್ದಕ್ಕೆ ಹೋಗಿದ್ದೆ. ಆದ್ರೆ, ಭಾಷಣ ಮಾಡುವಾಗ ಅಡ್ಡಿಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರೂ ಕೊಡಲಿಲ್ಲ ಎಂದರು. ಎಲ್ಲಿ, ಯಾವಾಗ, ಯಾರು ಈ ಮಾತು ಹೇಳಿದರು ಎಂಬ ದಾಖಲೆ ಬಿಡುಗಡೆ ಮಾಡಲಿ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಸವಾಲು ಹಾಕಿದರು.
15 ಲಕ್ಷ ರೂ. ಹಾಕ್ತೇವೆ ಎಂದು ಯಾರು ಹೇಳಿದ್ದಾರೆ..?
ಕಾಂಗ್ರೆಸ್ ನ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಕರೆಂಟ್ ನಿಮಗೂ ಉಚಿತ,ನಮಗೂ ಉಚಿತ ಎಂದು ಹೇಳಿ ಜನರಿಗೆ ಗ್ಯಾರಂಟಿ ಕಾರ್ಡ್ ಕೂಡ ನೀಡಿದ್ದಾರೆ ಹಾಗಾಗಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಚಿವರು ಪ್ರಧಾನಿಯವರು 15 ಲಕ್ಷ ಹಾಕಲಿಲ್ಲ ಎಂದು ಪದೇ ಪದೇ ಹೇಳುತ್ತಿದ್ದದ್ದು ಸರಿಯಲ್ಲ. ಹಾಗಾಗಿ, ನಾನು ಪ್ರಧಾನಿಯವರಿಗೆ ಕೇಳಿ ನೀವು 10 ಕೆಜಿ ನೀಡುತ್ತೇವೆಂಬ ಘೋಷಣೆ ಮಾಡಿದ್ದೀರಾ ಎಂದು ಪ್ರಶ್ನಿಸಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೋರಿದ ವರ್ತನೆ ಮಾತ್ರ ಸರಿಯಿರಲಿಲ್ಲ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಬಸವಂತಪ್ಪ ಕಾಂಗ್ರೆಸ್ ಗೆ ಜೈ ಎಂದ್ರು…!
ಶಾಸಕ ಬಸವಂತಪ್ಪ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ ಜೈ ಎಂದರು. ಐಎಎಸ್ ಅಧಿಕಾರಿಯಾದ ಮಹಾಂತೇಶ್ ಬೀಳಗಿ ಅವರು ಸಚಿವರ ಮುಂದೆ ನಾನು ನೀವು ಹೇಳಿದಂತೆ ಕೆಲಸ ಮಾಡುತ್ತೇನೆ ಎಂದು ನಮಸ್ಕರಿಸಿದರು.
ಒಬ್ಬ ಅಧಿಕಾರಿಯಾಗಿ ಸರ್ಕಾರದ ಕೆಲಸ ಮಾಡಲಿ. ಆದ್ರೆ, ಮಂತ್ರಿಯೆದರು ಈ ರೀತಿ ವರ್ತಿಸಿದ್ದು ಎಷ್ಟರ ಮಟ್ಟಿಗೆ ಸರಿ. ನಾನು ಮಾತನಾಡಿದ್ದು ಈ ಅಂಶಗಳನ್ನು ಆಧರಿಸಿ. ಆದ್ರೆ, ನಾನು ಅಹಂಕಾರದಿಂದ ಮಾತನಾಡಿದೆ ಎಂಬರ್ಥದಲ್ಲಿ ಮಾಧ್ಯಮದಲ್ಲಿ ಬಂದಿದೆ. ಕೇವಲ ನಾನು ಮಾತನಾಡಿದ ವಿಚಾರ ಮಾತ್ರ ಇದೆ. ಶಾಸಕರು, ಐಎಎಸ್ ಅಧಿಕಾರಿಯ ವರ್ತನೆ ಸರಿಯೇ ಎಂದು ಪ್ರಶ್ನಿಸಿದರು.
ಅಧಿಕಾರದಲ್ಲಿದ್ದವರ ತಪ್ಪು ಯಾಕೆ ತೋರಿಸಲ್ಲ..?
ಐಎಎಸ್ ಅಧಿಕಾರಿ ಕಾಂಗ್ರೆಸ್ ಪರ ಮಾತನಾಡಿದರೆ ಮಾಧ್ಯಮದವರು ಅವರನ್ನು ಪ್ರಶ್ನಿಸಲಿಲ್ಲ.ಅಧಿಕಾರದಲ್ಲಿದ್ದವರ ತಪ್ಪುಗಳನ್ನು ಹೇಳದಿದ್ದಾಗ ನಮಗೆ ಯಾಕೆ ಮಾತನಾಡಬೇಕಪ್ಪಾ ಅನಿಸುತ್ತದೆ.ಮಾಧ್ಯಮದವರು ಸಹ ಪೂರ್ಣ ಪ್ರಮಾಣದಲ್ಲಿ ಸುದ್ದಿ ಮಾಡದಿರುವುದು ಬೇಸರ ತರಿಸಿದೆ ಎಂದರು.
ಆ. 10ರೊಳಗೆ ನಾಲೆಯಲ್ಲಿ ನೀರು ಹರಿಸಿ:
ಆಗಸ್ಟ್ 10ರೊಳಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಯಲ್ಲಿ ನೀರು ಹರಿಸಬೇಕು. ಕಾಡಾ ಅಥವಾ ನೀರಾವರಿ ಇಲಾಖೆಯ ಅಧಿಕಾರಿಗಳು ದಿನಾಂಕ ನಿಗದಿಪಡಿಸಿ ತಿಳಿಸಬೇಕು. ಭದ್ರಾ ಡ್ಯಾಂನಿಂದ ನೀರು ಹರಿಸಲಾಗುತ್ತಿದೆ ಎಂದುಕೊಂಡು
ರೈತರು ಇದ್ದಾರೆ. ಭದ್ರಾ ಡ್ಯಾಂ ಸಹ 166 ಅಡಿ ದಾಟಿದ್ದು, ಆದಷ್ಟು ಬೇಗ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್, ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಕ, ಲಿಂಗರಾಜ್ ಮತ್ತಿತರರು ಹಾಜರಿದ್ದರು.
Harihara, Harihara Mla, Harihara Mla Angry, Harihara Mla B. P. Harish,
Harihara Mla News, Harihara Mla Suddi,
Harihara Mla Suddi Update