ದಾವಣಗೆರೆ: ಹರಿಹರ ಮತ್ತು ಹರಪನಹಳ್ಳಿ ತಾಲೂಕಿನ ರೈತರ ನೂರಾರು ಎಕರೆ ಫಲವತ್ತಾದ ಜಮೀನನ್ನು ಖಾಸಗಿ ಕಾರ್ಖಾನೆಗೆ ಭೂಸ್ವಾಧೀನ ಮಾಡಿಕೊಡುತ್ತಿರುವ ಪ್ರಕ್ರಿಯೆಗೆ ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ನೇರವಾಗಿ ಭೇಟಿಯಾದ ಶಾಸಕರು, ಸಂತ್ರಸ್ತ ರೈತರಿಗೆ ತಕ್ಷಣವೇ ನ್ಯಾಯ ಒದಗಿಸಿಕೊಡಬೇಕೆಂದು ಬಲವಾಗಿ ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಒಡೆತನದ ಕಾರ್ಖಾನೆಗೆ ನಿಯಮಬಾಹಿರವಾಗಿ ರೈತರ ಭೂಮಿಯನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಸುಮಾರು 100 ಎಕರೆ ಹಾಗೂ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಸುಮಾರು 250 ಎಕರೆ ಜಮೀನು ಸೇರಿದಂತೆ ಒಟ್ಟು 350 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರೈತರ ಹಿತಾಸಕ್ತಿಗೆ ಆದ್ಯತೆ: ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಹಕ್ಕುಗಳನ್ನು ರಕ್ಷಿಸುವುದೇ ಮೊದಲ ಆದ್ಯತೆಯಾಗಬೇಕು.
ಕಾನೂನುಬದ್ಧತೆ ಪರಿಶೀಲನೆ: ಭೂಸ್ವಾಧೀನ ಪ್ರಕ್ರಿಯೆಯ ಕಾನೂನುಬದ್ಧತೆ ಹಾಗೂ ನಿಯಮಗಳನ್ನು ತಕ್ಷಣವೇ ಸಮಗ್ರವಾಗಿ ಪರಿಶೀಲಿಸಬೇಕು.
ಸಂತ್ರಸ್ತರಿಗೆ ನ್ಯಾಯ: ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಚಿಕ್ಕಬಿದರಿ ಮತ್ತು ದುಗ್ಗಾವತಿ ಗ್ರಾಮಗಳ ಸಂತ್ರಸ್ತ ರೈತರಿಗೆ ಸಂಪೂರ್ಣ ನ್ಯಾಯ ದೊರಕಿಸಿಕೊಡಬೇಕು.
ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಸಂತ್ರಸ್ತ ರೈತರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸುವುದಾಗಿ ಶಾಸಕ ಬಿ.ಪಿ. ಹರೀಶ್ ಎಚ್ಚರಿಸಿದ್ದಾರೆ.





Leave a comment