SUDDIKSHANA KANNADA NEWS/ DAVANAGERE/ DATE:31-03-2024
ದಾವಣಗೆರೆ: ಪಕ್ಷದ ಹೈಕಮಾಂಡ್ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಘೋಷಿಸಿದೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸೋಣ. ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷರೂ, ಅಹಿಂದ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ಅವರು ಮುಜುಗರ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಜಿ. ಬಿ. ವಿನಯ್ ಕುಮಾರ್ ಅವರು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡಿದ್ರು. ಸರ್ವೇಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಬಂದ ಕಾರಣ ಹೈಕಮಾಂಡ್ ಟಿಕೆಟ್ ನೀಡಿದೆ. ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೆ. 2019ರಲ್ಲಿ ಸ್ಪರ್ಧಿಸಿ ಸೋತಿದ್ದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅದೇ ರೀತಿಯಲ್ಲಿ ವಿನಯ್ ಕುಮಾರ್ ಅವರೂ ಪಕ್ಷದ ತತ್ವ, ಸಿದ್ಧಾಂತ ಪಾಲಿಸಬೇಕು ಎಂದು ತಿಳಿಸಿದರು.
ಗೆಲುವಿಗೆ ಶ್ರಮಿಸೋಣ:
ವಿನಯ್ ಕುಮಾರ್ ಪಕ್ಷಕ್ಕೆ ಮುಜುಗರವಾಗುವಂಥ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಪಕ್ಷದ ಟಿಕೆಟ್ ಕೇಳಿದ್ದೀರಾ. ಟಿಕೆಟ್ ಕೇಳಲು ಅವಕಾಶ, ಹಕ್ಕಿದೆ. ಯಾರಿಗೂ ಅಡೆತಡೆ ಮಾಡಿಲ್ಲ. ಬಹಳ ಪ್ರಯತ್ನ ಮಾಡಿದ್ರು.
ಮೂರ್ನಾಲ್ಕು ತಿಂಗಳಲ್ಲಿ ಬಂದರೂ ಪ್ರಯತ್ನ ಮಾಡಿದರು. ಪರಾಜಿತ ಅಭ್ಯರ್ಥಿಯಾದರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷ ತೀರ್ಮಾನ ಮಾಡಿ ಟಿಕೆಟ್ ಘೋಷಿಸಿದ್ದರೆ ನಾನು ಸ್ಪರ್ಧಿಸಬೇಕೆಂದುಕೊಂಡಿದ್ದೆ. ಆದ್ರೆ, ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದ್ದು, ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ದಿಢೀರನೆ ಬಂದಾಕ್ಷಣ ಟಿಕೆಟ್ ಸಿಗದು:
ವಿನಯ್ ಕುಮಾರ್ ಅವರ ನಿನ್ನೆ ಮೊನ್ನೆ ಹೇಳಿಕೆ ಗಮನಿಸಿದ್ದೇನೆ. ಅಭ್ಯರ್ಥಿ ವಿರುದ್ಧ ಹೇಳಿಕೆ ನೀಡಿದ್ದೀರಾ. ನಿಷ್ಠಾವಂತ ಕಾರ್ಯಕರ್ತ, ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡವರು ತತ್ವ, ಸಿದ್ಧಾಂತಕ್ಕೆ ಧಕ್ಕೆ ತರಬಾರದು. ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆ ನೀಡುವುದು ಅವರಾಗಲೀ, ನಾನಾಗಲೀ ತಪ್ಪು. ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಬಂದು ಟಿಕೆಟ್ ಸಿಗದ ಕಾರಣ ಹೀಗೆ ಮಾತನಾಡಿದರೆ ಹೇಗೆ? ಸಾಕಷ್ಟು ಸಮಯ ಇದೆ. ವಯಸ್ಸಿದೆ, ದಿಢೀರನೆ ಬಂದು ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷ, ಪಕ್ಷದ ಅಭ್ಯರ್ಥಿ, ಮುಖಂಡರ
ಬಗ್ಗೆ ಮಾತನಾಡುವುದು ತಪ್ಪು ಎಂದು ಮಂಜಪ್ಪ ಹೇಳಿದರು.
ವಿರೋಧಿ ಚಟುವಟಿಕೆ ಇಲ್ಲಿಗೆ ನಿಲ್ಲಿಸಿ:
ಹಳ್ಳಿಗಳಲ್ಲಿ ವಿನಯ್ ಕುಮಾರ್ ಸುತ್ತಾಡುವುದನ್ನು ಗಮನಿಸಿದ್ದೇನೆ. ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ ಗ್ರಾಮಗಳಿಗೆ ಹೋಗಿ ಪಕ್ಷ ಎತ್ತಿಕಟ್ಟುವುದು ಸರಿಯಲ್ಲ. ವಿನಯ್ ಕುಮಾರ್ ನಾನು ಬಡತನದಿಂದ ಬಂದು ಟಿಕೆಟ್ ಕೇಳಿದ್ದೇನೆ ಎಂದಿದ್ದಾರೆ. ನಾನು ಸಹ ಬಡತನದಿಂದಲೇ ಬಂದವನು. ಯೂತ್ ಕಾಂಗ್ರೆಸ್, ಎನ್ ಎಸ್ ಯುಐ, ಜಿಲ್ಲಾ ಕಾಂಗ್ರೆಸ್, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಲೋಕಸಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದೇನೆ. ವಿನಯ್ ಕುಮಾರ್ ಗೂ ಅವಕಾಶ ಇದೆ.
ಪಕ್ಷದ ಸಂಘಟನೆ ಮಾಡಿಲ್ಲ. ದಿಢೀರನೇ ಟಿಕೆಟ್ ಕೇಳಿದ್ರು. ಟಿಕೆಟ್ ಘೋಷಣೆ ಆದ ಮೇಲೆ ಪಕ್ಷಕ್ಕೆ ಮುಜುಗರವಾಗುವಂಥ ಕೆಲಸ ಮಾಡಬಾರದು. ಇಲ್ಲಿಗೆ ಚಟುವಟಿಕೆ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ. ನಾಲ್ಕು ತಿಂಗಳಿಂದ ಬಂದ ನೀವು ಟಿಕೆಟ್ ಪಡೆಯಲು ಪಟ್ಟ ಶ್ರಮ ಗೊತ್ತಿದೆ. ಪಕ್ಷವೂ ಮುಂಬರುವ ದಿನಗಳಲ್ಲಿ ಕೆಲಸ ಗುರುತಿಸುತ್ತದೆ. ಅವಕಾಶ ಮಾಡಿಕೊಡುತ್ತದೆ. ಇದಕ್ಕೆ ತಯಾರಾಗಬೇಕು. ಅಭ್ಯರ್ಥಿಗೆ ಕ್ಷೇತ್ರ ಗೊತ್ತಿಲ್ಲ ಎಂದು ಹೇಳಿರುವುದು ಸಮಂಜಸವಲ್ಲ. ಶಾಮನೂರು ಶಿವಶಂಕರಪ್ಪರ ಕುಟುಂಬದ ಬಗ್ಗೆ ವಿನಯ್ ಕುಮಾರ್ ಗೆ ಮಾಹಿತಿ ಇಲ್ಲ ಎನಿಸುತ್ತದೆ. ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿಯೂ ಓಡಾಡಿದ್ದಾರೆ. ಹಳ್ಳಿ ಹಳ್ಳಿಗೂ ಹೋಗಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದರೂ, ಸೋತರೂ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಜಿಲ್ಲಾಧ್ಯಕ್ಷನಾಗಿ ಓಡಾಡಿದ್ದೇನೆ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕಷ್ಟು ಪ್ರಚಾರ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.
ನಾನೂ ಕುರುಬ ಸಮಾಜದವನು:
ಕಾಂಗ್ರೆಸ್ ಅಭ್ಯರ್ಥಿಗೆ ಜನರ ಪರಿಚಯವಿಲ್ಲ, ಕ್ಷೇತ್ರ ಗೊತ್ತಿಲ್ಲ ಎಂಬ ಅಸಭ್ಯ ಮಾತನಾಡಬಾರದು. ಪಕ್ಷದಲ್ಲಿ ಸಂಘಟನೆ ಮಾಡಿ ಒಳ್ಳೆಯ ಹೆಸರು ಮಾಡಬೇಕೆಂದರೆ ನಮ್ಮ ಜೊತೆ ಕೈ ಜೋಡಿಸಬೇಕು. ಬೆಂಬಲ ನೀಡಬೇಕು. ನಾನು ಹಿಂದುಳಿದ ವರ್ಗದ ಸಮಾಜವದವನೇ. ಕುರುಬ ಸಮಾಜದವರು. ಚನ್ನಯ್ಯ ಒಡೆಯರ್ ಪುತ್ರ ಶಿವಕುಮಾರ್ ಒಡೆಯರ್ ಪುತ್ರರೂ ಟಿಕೆಟ್ ಕೇಳಿದ್ದರು. ಅವರಿಗೆ ಸಿಕ್ಕಿಲ್ಲ. ಅವರೂ ಸಹ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅಭ್ಯರ್ಥಿ ಗೆಲುವಿಗೆ ಹೋರಾಟ ನಡೆಸುತ್ತೇವೆ. ಅಹಿಂದ ನಾಯಕರು ಒಟ್ಟಾಗಿದ್ದೇವೆ ಎಂದು ತಿಳಿಸಿದರು.
ದಿಢೀರನೆ ಬಂದು ರಾಜಕಾರಣಿ ಆಗಲು ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆ ಹಿಂದೆಯೂ ಇರಲಿಲ್ಲ, ಚುನಾವಣೆ ಆದ ಮೇಲೂ ಇರಲಿಲ್ಲ. ಯಾಕೆ ಬಂದರು ಹೇಗೆ ಬಂದರು ಎಂಬುದು ಗೊತ್ತಿಲ್ಲ. ಸಿದ್ದರಾಮಯ್ಯನವರು ಮೈಸೂರಿನಿಂದ ಹೋಗಿ ಬಾದಾಮಿಯಲ್ಲಿ ಗೆದ್ದಿಲ್ವಾ ಎಂದ್ರು. ಮುಂದಿನ
ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಲಿವೆ. ನಮ್ಮ ಜೊತೆಗೆ ಬಂದು ಸಂಘಟನೆ ಮಾಡಿ ಕೆಲಸ ಮಾಡಲಿ, ಕೈ ಜೋಡಿಸಲಿ. ಅದನ್ನು ಮಾಡಬೇಕು. ವಿರೋಧ ಚಟುವಟಿಕೆಗಳನ್ನು ಬಿಡಬೇಕು. ಒಂದು ಸಮಾಜದ ಬಳಿ ಹೋಗುವುದು, ಹೇಳಿಕೆ ನೀಡುವುದು ಸರಿಯಲ್ಲ. ಸಮಾಜವದರು ಮತ ಹಾಕಿದರೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಮತ ಹಾಕಿದ್ದರೂ ಸಮಾಜದಲ್ಲಿ ತಪ್ಪು ಸಂದೇಶ ಹೋಗುತ್ತದೆ ಎಂದರು.
ಸಿದ್ದರಾಮಯ್ಯರ ಕೈ ಬಲಪಡಿಸೋಣ:
ವಿನಯ್ ಕುಮಾರ್ ನಮ್ಮ ಸಮಾಜವದರು. ಸಿದ್ದರಾಮಯ್ಯನವರ ಕೈ ಬಲಪಡಿಸಲು ಕುರುಬ ಸಮುದಾಯವು ಕಾಂಗ್ರೆಸ್ ಗೆ ಮತ ನೀಡುತ್ತಿದ್ದಾರೆ. ಯಾರಿಗೆ ಅನ್ಯಾಯವಾದರೂ ಸರಿಪಡಿಸೋಣ. ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಬೇಕು ಎಂಬ ಆಸೆ ಸಮಾಜದ ಬಂಧುಗಳಲ್ಲಿ ಇದೆ. ಎಲ್ಲೋ ಹೋಗಿ ನಾಲ್ಕು ಜನ ಯುವಕರಿಗೆ ಮಾತನಾಡಿಸಿ ಹೇಳಿಕೆ ನೀಡಿಸುವುದು, ಫೇಸ್ ಬುಕ್, ವಾಟ್ಸಪ್ ನಲ್ಲಿ ಚರ್ಚೆ ಮಾಡುವುದನ್ನು ಕೈ ಬಿಡಬೇಕು. ಟಿಕೆಟ್ ನೀಡಿದ್ದರೆ ಸಮಾಜ ನನಾಗಾದರೂ ನಿಮಗಾದರೂ ಬೆಂಬಲ ನೀಡುತಿತ್ತು. ಸಿದ್ದರಾಮಯ್ಯರನ್ನು ನೋಡಬೇಕು. ಮುಂದೊಳ್ಳೆ ಅವಕಾಶ ಮಾಡಿಕೊಡುತ್ತಾರೆ. ಸಮಾಜಕ್ಕೆ ದ್ರೋಹ, ಎತ್ತಿ ಕಟ್ಟುವ ಕೆಲಸ ಮಾಡಬಾರದು. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಈಗಿನ ಚಟುವಟಿಕೆಗಳನ್ನು ಇಲ್ಲಿಗೆ ಕೈ ಬಿಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಒಮ್ಮೆ ಘೋಷಣೆ ಮಾಡಿದ ಬಳಿಕ ಬದಲಾವಣೆ ಪ್ರಶ್ನೆ ಇಲ್ಲ. ನಮ್ಮ ಜೊತೆ ಕೈ ಜೋಡಿಸಿ.
ಭಾಗವಹಿಸಿ ಗೆಲುವಿಗೆ ಶ್ರಮಿಸಬೇಕು ಎಂದರು.
ನಮ್ಮ ಹಂತದಲ್ಲಿ ತೆಗೆದುಕೊಳ್ಳಲು ಸಾಧ್ಯವಾದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಇಲ್ಲದಿದ್ದರೆ ಕೆಪಿಸಿಸಿ ಕಳುಹಿಸಿಕೊಡಲಾಗುತ್ತದೆ. ಅಲ್ಲಿನ ಶಿಸ್ತು ಸಮಿತಿ ಕ್ರಮ ಜರುಗಿಸುತ್ತದೆ. ಪ್ರಾಥಮಿಕ ಸದಸ್ಯತ್ವ ಪಡೆದಿರಬಹುದು. ನನಗೆ ಗೊತ್ತಿರುವ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಸದಸ್ಯತ್ವ ಪಡೆದಿಲ್ಲ. ಜಿಲ್ಲೆಯಲ್ಲಿ ಏಳೂವರೆ ಸಾವಿರ ಜನರು ಸದಸ್ಯರಿದ್ದಾರೆ. ನಮ್ಮ ಪಕ್ಷ ಸಂಘಟನೆಯಲ್ಲಿ ವಿನಯ್ ಕುಮಾರ್ ಇಲ್ಲ. ವಿನಯ್ ಕುಮಾರ್ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ನಮಗೇನೂ ಆತಂಕ ಇಲ್ಲ. ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ಬರಬಾರದು. ಈ ನಿಟ್ಟಿನಲ್ಲಿ ನಡೆದುಕೊಳ್ಳುವಂತೆ ಹೇಳುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ನಾಯಕರು 20 ಸ್ಥಾನ ಕಾಂಗ್ರೆಸ್ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಹಾಗಾಗಿ, ನಾವೆಲ್ಲರೂ ಅಹಿಂದ ಮುಖಂಡರು ಸೇರಿಕೊಂಡಿದ್ದೇವೆ. ಒಟ್ಟಾಗಿ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.
ವಿನಯ್ ಕುಮಾರ್ ಜಿಲ್ಲಾ ನಾಯಕರ ಸಂಪರ್ಕದಲ್ಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸಂಪರ್ಕದಲ್ಲಿದ್ದರು. ನಾವು ಮಾತನಾಡುತ್ತೇವೆ. ಕರೆದು ಮಾತಾಡುತ್ತೇವೆ. ಪಕ್ಷಕ್ಕೆ ಹಾನಿಯುಂಟು ಮಾಡಬೇಡಿ ಎಂದು ಸಲಹೆ ನೀಡುತ್ತೇವೆ ಎಂದರು.