ಬೆಂಗಳೂರು: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹಿರಿಯ ಮಹಿಳೆಯೊಬ್ಬರು, “ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ” ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಈ ಯೋಜನೆ ನಿಲ್ಲಿಸಲಾಗದು” ಎಂದು ಭರವಸೆ ನೀಡಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಮಿ ಯೋಜನೆ ಫಲಾನುಭವಿಗಳ ಜೊತೆ ಶುಕ್ರವಾರ ನಡೆಸಿದ ಸಂವಾದ ಇಂತಹ ಹಲವಾರು ಭಾವುಕ ಕ್ಷಣಗಳಿಗೆ ಜೊತೆಗೆ ಸ್ವಾವಲಂಬಿ ಸಾಧನೆಯ ಕಥೆಗಳಿಗೆ ಸಾಕ್ಷಿಯಾಯಿತು.
ನೃತ್ಯ ಕಲಿಯಲು ಮಗಳನ್ನು ವಿದೇಶಕ್ಕೆ ಕಳಿಸಿದ್ದೇವೆ
“ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷಿಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೆಷ್ಯಾವರೆಗೆ ಪ್ರಯಾಣ ಬೆಳೆಸಲು ನೆರವಾದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು” ಎಂದು ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನದಲ್ಲಿ ಮುಳುಗಿತು.
ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ
ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. “ಗೃಹಲಕ್ಷ್ಮಿಯ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ” ಎಂದು ತಿಳಿಸಿದರು.
“ಚಕ್ಕುಲಿ ತಂದಿದ್ದೀರಾ” ಎಂದು ಸಿಎಂ ಕೇಳಿದಾಗ,”ನಿಮಗಾಗಿಯೇ ತಂದಿದ್ದೇನೆ” ಎಂದು ನುಡಿದರು. “ಈ ಯೋಜನೆಯಿಂದಾಗಿ ನಿಮ್ಮನ್ನು ನೋಡುವ ಭಾಗ್ಯ ಇಂದು ನಮಗೆ ಸಿಕ್ಕಿದೆ” ಎಂದು ಹರ್ಷಿಸಿದರು.
ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, “ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು” ಎಂದು ವಿವರಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದ್ದನ್ನು ಸ್ಮರಿಸಿ, “ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ. ಎಲ್ಲರ ಹಾರೈಕೆ ನಮ್ಮಣ್ಣನ ಮೇಲಿದೆ” ಎಂದು ತುಂಬು ಹೃದಯದಿಂದ ಹಾರೈಸಿದರು.
ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಕೊಂಡ ಸಿಎಂ
ಕಲಬುರಗಿ ಜಿಲ್ಲೆಯ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿ, ತಾವು ತಂದ ತೊಟ್ಟಿಲು, ದೀಪ ಮತ್ತಿತರ ವಸ್ತುಗಳನ್ನು ಪ್ರದರ್ಶಿಸಿದರು. ಆ ವಸ್ತುಗಳನ್ನು ಸಿಎಂ ಗೆ ಉಡುಗೊರೆ ನೀಡಿ, ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.
“ತೊಟ್ಟಿಲು ನಂಗೆ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದು” ಎಂದು ಕೇಳಿ 500 ರೂಪಾಯಿ ನೀಡಿ ತೊಟ್ಟಿಲು ಕೊಂಡು ಕೊಂಡರು.
ಕಲಬುರಗಿ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು ‘ಗೃಹಲಕ್ಷ್ಮಿಯಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ’ ಎಂದರು. ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿವರಿಸಿದ ಅವರು, ‘ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಿರುವುದಾಗಿ ತಿಳಿಸಿದರು. ತಾಯಾಗಿ ನಿಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ” ಎಂದು ಭರವಸೆಯಿತ್ತರು.
ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾಗಿರುವ ಮಹಿಳೆಯೊಬ್ಬರು, ಪಕ್ಷದ ಕೆಲಸದಲ್ಲಿ ಭೇಟಿಯಾಗಲು ಆಗಲಿಲ್ಲ. ಆದರೆ ಈಗ ಗೃಹಲಕ್ಷ್ಮಿ ಫಲಾನುಭವಿಯಾಗಿ ನನಗೆ ತಮ್ಮನ್ನು ಭೇಟಿಯಾಗುವ ಸೌಭಾಗ್ಯ ದೊರೆಯಿತು ಎಂದು ಹರ್ಷಿಸಿದರು. ಸಮಾಜ ಸೇವಕಿಯೂ ಆಗಿರುವ ಇವರು ತಮ್ಮ ಕಾರ್ಯಚಟುವಟಿಕೆಗಳಿಗೆ ಓಡಾಡಲು ಶಕ್ತಿ ಯೋಜನೆ ನೆರವಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ಆದರೆ ಗೃಹಲಕ್ಷ್ಮಿ ಯೋಜನೆಯನ್ನು ತಾವು ಪಕ್ಷಾತೀತವಾಗಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಸ್ಥಳೀಯ ಮಹಿಳೆಯರ ಅಭಿಪ್ರಾಯವೇನು? ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಹಿಳೆಯರಲ್ಲಿ ಮೆಚ್ಚುಗೆ ಇದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಕೂಲಿಕಾರ ಮಹಿಳೆ, ತಮ್ಮ ಮಕ್ಕಳನ್ನು ಓದಿಸಲು ಗೃಹಲಕ್ಷ್ಮಿಯಿಂದ ಸಾಧ್ಯವಾಯಿತು ಎಂದರು. ಜೊತೆಗೆ ತಮ್ಮ ಊರಿಗೆ ಬಸ್ ಇಲ್ಲ. ದಿನಾ 5 ಕಿ.ಮೀ. ನಡೆದು ಹೋಗಬೇಕು. ಊರಿಗೆ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ಚಡಚಣದ ಮಹಿಳೆ ಜರ್ಸಿ ಆಕಳು ಖರೀದಿಸಿ, ಹೈನುಗಾರಿಕೆ ಮಾಡುತ್ತಿರುವುದಾಗಿ ವಿವರಿಸಿದರು. ಅಂಗನವಾಡಿ ಮಕ್ಕಳಿಗೆ ಯೂನಿಫಾರಂ, ಬ್ಯಾಗ್ ಕೊಡಿಸಿರುವುದಾಗಿ ತಿಳಿಸಿದರು.
ಗದಗ ಜಿಲ್ಲೆಯ ಕಪ್ಪತ್ತಗಿರಿಯ ಲಂಬಾಣಿ ಮಹಿಳೆ ತಮ್ಮ ಊರಿನಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ತವರುಮನೆ ಉಡುಗೊರೆಗೆ ಕಾದಂತೆ ಕಾಯುತ್ತಿರುತ್ತಾರೆ ಎಂದಾಗ ಇತರರು ಹೌದೌದು ಎಂದು ತಲೆಯಾಡಿಸಿದರು.
ಚಿತ್ರದುರ್ಗದ ವಿಧವೆಯೊಬ್ಬರು, ತಮ್ಮ ಬದುಕಿನ ಏಕಾಂಗಿ ಹೋರಾಟದಲ್ಲಿ ಗೃಹಲಕ್ಷ್ಮಿ ಜೊತೆಯಾಗಿದ್ದನ್ನು ಸ್ಮರಿಸಿಕೊಂಡರು. ರೊಟ್ಟಿ ಮಾರಿ ಬದುಕುತ್ತಿದ್ದ ಅವರು ಗೃಹಲಕ್ಷ್ಮಿ ಮೊತ್ತದಲ್ಲಿ ರೊಟ್ಟಿ ಯಂತ್ರ ಖರೀದಿಸಿ, ಇಬ್ಬರು ಸಹಾಯಕಿಯರ ನೆರವಿನಿಂದ ಕೆಲಸ ಮಾಡುತ್ತಿರುವುದನ್ನು ಕೃತಜ್ಞತೆಯಿಂದ ವಿವರಿಸಿದರು.
ಬಳ್ಳಾರಿಯ ಆಸ್ಪತ್ರೆಯೊಂದರಲ್ಲಿ ಸಣ್ಣ ಹುದ್ದೆಯೊಂದರಲ್ಲಿರುವ ಮಹೇಶ್ವರಿ, ಗೃಹಲಕ್ಷ್ಮಿ ಹಣದಲ್ಲಿ ವಾಷಿಂಗ್ ಮಷಿನ್, ಟಿವಿ ಮತ್ತಿತರ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿದೆ. ಮನೆಗೆಲಸ ಹಗುರಾಗಿದೆ ಎಂದರು.
ರಾಯಚೂರಿನ ಮಹಿಳೆ ಹೊಲಿಗೆಯಂತ್ರ ಖರೀದಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಲ್ಲದೆ ಮೂವರಿಗೆ ಉದ್ಯೋಗದಾತೆಯಾಗಿದ್ದಾರೆ. ದಿನಕ್ಕೆ ಸಾವಿರದಿಂದ ಎರಡು ಸಾವಿರ ದುಡಿಯುತ್ತಿದ್ದಾರೆ. ಇದರಿಂದಾಗಿ ತಮಗೆ ಪತಿಯ ಗೌರವ, ಅತ್ತೆ ಮಾವಂದಿರ ಪ್ರೀತಿ ಲಭಿಸಿದೆ ಎಂದು ನುಡಿದರು.
ವಿಜಯಪುರ ಜಿಲ್ಲೆಯ ಮಹಿಳೆ ಮಗಳ ಕ್ರೀಡಾ ತರಬೇತಿ ಫೀಸ್ ಕಟ್ಟಲು ಅನುಕೂಲವಾಗಿದ್ದು, ಮಗಳು ರಾಜ್ಯಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದನ್ನು ಹೆಮ್ಮೆಯಿಂದ ವಿವರಿಸಿದರು.
ಶಿವಮೊಗ್ಗ ಜಿಲ್ಲೆಯ ಕೂಲಿಕಾರ ಮಹಿಳೆಯೊಬ್ಬರು ಚಿಕನ್ ವ್ಯಾಪಾರ ಪ್ರಾರಂಭಿಸಿದ ಯಶೋಗಾಥೆಯನ್ನು ತೆರೆದಿಟ್ಟರು.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು- ಗಂಡಬೊಮ್ಮನಹಳ್ಳಿ ಪಂಚಾಯಿತಿಯ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಸ್ವಸಹಾಯ ಗುಂಪಿನ ಗೆಳತಿಯರು ಕುರಿ ಸಾಕಾಣಿಕೆಯನ್ನು ಬೆಳೆಸಿದ ಪರಿಯನ್ನು ವಿವರಿಸಿದರು. ಐದು ಕುರಿಯಿಂದ ಪ್ರಾರಂಭವಾಗಿ ಇಂದು 300 ಕುರಿಗಳನ್ನು ಸಾಕುತ್ತಿರುವುದಾಗಿ ಹೇಳಿದರು. ಜೊತೆಗೆ ಕುರಿ ಮೇಯಿಸಲು ಐದು ಜನ ಗಂಡುಮಕ್ಕಳಿಗೆ ಉದ್ಯೋಗ ನೀಡಿರುವುದಾಗಿ ಹೇಳಿದಾಗ ಸಿಎಂ ಆದಿಯಾಗಿ ಎಲ್ಲರಿಂದ ಚಪ್ಪಾಳೆಯ ಸುರಿಮಳೆ.
ಗೃಹ ಲಕ್ಷ್ಮಿಯ ಹಣದಲ್ಲಿ ಹೊಲಿಗೆ ಮಷೀನ್ ಖರೀದಿಸಿರುವುದಾಗಿ ಮತ್ತೊಬ್ಬರು ಹೇಳಿದರು. ಬಟ್ಟೆ ವ್ಯಾಪಾರಕ್ಕೆ ಬಂಡವಾಳ ಒದಗಿಸಿದೆ. ಗ್ಯಾಸ್ ಖರೀದಿಸಿ ಹೊಟ್ಟೆ ತುಂಬ ಊಟ ಮಾಡುವ ಸಂತೃಪ್ತಿಯನ್ನು ನೀಡಿದೆ. ಮಕ್ಕಳ ಕನಸಿಗೆ ರೆಕ್ಕೆ ಮೂಡಿಸಿದ ಹೆಮ್ಮೆ, ವ್ಯಾಪಾರ ವಿಸ್ತರಣೆ, ಹಿರಿಯ ಮಹಿಳೆಯರಿಗೆ ಭದ್ರತೆಯ ಭಾವನೆ ಹೀಗೆ ಹಲವಾರು ಯಶೋಗಾಥೆಗಳು ಸಿಎಂ ಸಂವಾದದಲ್ಲಿ ಅನಾವರಣಗೊಂಡವು.
ಕಾರ್ಯಕ್ರಮದ ಅಂತ್ಯದಲ್ಲಿ ಸಿಎಂ ಜೊತೆ ಫೋಟೋ ತೆಗೆಸಿಕೊಂಡ ಮಹಿಳೆಯರ ಕಣ್ಣಲ್ಲಿ ದೀಪಾವಳಿಯ ಹೊಂಬೆಳಕು ನಳನಳಿಸುತ್ತಿತ್ತು.
‘ಗೃಹಲಕ್ಷ್ಮಿ’ ಯೋಜನೆಗೆ ಪ್ರೇರಣೆ ಜಾನಪದ ಗೀತೆ
“ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ, ನಾಯಿಗಿಂತ ಕಡೆಯಾಗಿ ಹೋಯಿತೇ ನನ ಬಾಳು ಕೇಳವ್ವ…” ಜಾನಪದ ಹಾಡಿನ ಈ ಸಾಲುಗಳು ದೇಶದ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿರುವ ಗೃಹಲಕ್ಷ್ಮಿ ಉದಯಕ್ಕೆ ಪ್ರೇರಣೆಯಾಗಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, “ಒಂದು ರಾತ್ರಿ ನನ್ನ ಕಸಿನ್ ಈ ಹಾಡು ಹೇಳುವಾಗ ಗೃಹಲಕ್ಷ್ಮಿ ಯೋಜನೆ ಕುರಿತ ಕಲ್ಪನೆ ನನ್ನಲ್ಲಿ ಮೂಡಿತು. ಹೆಣ್ಣುಮಕ್ಕಳಿಗೆ ಶಕ್ತಿ ನೀಡಬೇಕೆಂದು ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು. ಹೆಣ್ಣುಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನಾವು ಅಂದುಕೊಂಡಂತೆ ಮಹಿಳೆಯರ ಬದುಕಿನಲ್ಲಿ ಬದಲಾವಣೆ ಆಗಿದೆ” ಎಂದು ಆತ್ಮತೃಪ್ತಿ ವ್ಯಕ್ತಪಡಿಸಿದರು. ಸಿಎಂ ಮಾತಿಗೆ ದನಿಗೂಡಿಸಿದ ಮಹಿಳೆಯರು ಈ ಮೊತ್ತ ನಮಗೆ “ತವರುಮನೆ ಉಡುಗೊರೆಯಂತೆ” ಎಂದು ಬಣ್ಣಿಸಿದರು
“ಮಹಿಳೆಯರಿಗೆ ಶಕ್ತಿ ತುಂಬಬೇಕು. ಸರ್ಕಾರ ಅವರಿಗೆ ತವರಿನ ಪ್ರೀತಿ, ವಾತ್ಸಲ್ಯ ನೀಡಬೇಕು ಎಂಬ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆಯನ್ನು ಆರಂಭಿಸಿದೆ” ಎಂದು ಹೇಳಿದಾಗ ಅಲ್ಲಿದ್ದ ಗೃಹಲಕ್ಷ್ಮಿಯರು ಭಾವುಕರಾದರು.





Leave a comment