SUDDIKSHANA KANNADA NEWS/ DAVANAGERE/ DATE:12-12-2024
ದಾವಣಗೆರೆ: ಡಿಸೆಂಬರ್ 22 ರೊಳಗಾಗಿ ಸೊಪ್ಪಿನ ವ್ಯಾಪಾರಿಗಳಿಗೆ ಎ.ಪಿ.ಎಂ.ಸಿ ಮಾರ್ಕೆಟ್‌ಗೆ ಸ್ಥಳಾಂತರವಾಗಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಜನವರಿ 10 ರೊಳಗೆ ಸೊಪ್ಪಿನ ವ್ಯಾಪಾರಿಗಳು ಎ.ಪಿ.ಎಂ.ಸಿ. ಮಾರ್ಕೇಟ್ ಗೆ ಸ್ಥಳಾಂತರವಾಗಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಮಹಾನಗರ ಪಾಲಿಕೆಯ ಡಾ.ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ. ಸೊಪ್ಪಿನ ಮಾರುಕಟ್ಟೆ ಸ್ಥಳಾಂತರಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡಿಪೇಟೆ, ಚೌಕಿಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ , ವಾಯುಮಾಲಿನ್ಯ ಹಾಗೂ ಅಲ್ಲಿನ ಸ್ವಚ್ಚತೆಗೆ ತುಂಬಾ ಸಮಸ್ಯೆಯಾಗುತ್ತಿರುವ ಕಾರಣ ಮಂಡಿಪೇಟೆ ಪ್ರದೇಶದಲ್ಲಿ ಸೊಪ್ಪಿನ ವ್ಯಾಪರಿಗಳನ್ನು ಎ.ಪಿ.ಎಂ.ಸಿ ಗೆ ಸ್ಥಳಾಂತರಿಸುವುದು ಅನಿವಾರ್ಯ ಎಂದು ತಿಳಿಸಿದರು.
ದಾವಣಗೆರೆ ನಗರದಲ್ಲಿ ವಾಹನ ದಟ್ಟಣೆ ಹಾಗೂ ನಿಲುಗಡೆ ಸಮಸ್ಯೆ ತುಂಬಾ ಹೆಚ್ಚಾಗಿರುವ ಕಾರಣ ಇದರಿಂದ ಸಾಕಷ್ಟು ಅನಾನುಕೂಲಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಶೇ. 80 ರಷ್ಟು ನಮ್ಮ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಹೊರ ರಾಷ್ಟ್ರದಿಂದ ಬರುತ್ತದೆ ಆ ಹೊರ ರಾಷ್ಟ್ರದಿಂದ ಪೆಟ್ರೋಲ್ ಡೀಸೆಲ್ ತೆಗೆದುಕೊಳ್ಳಬೇಕಾದರೆ ನಮ್ಮ ದುಡ್ಡನ್ನು ಕೊಟ್ಟು ಅದನ್ನು ಡಾಲರ್‌ಗೆ ಬದಲಾವಣೆ ಮಾಡಿ ನಾವು ತೆಗೆದುಕೊಳ್ಳಬೇಕಾಗುತ್ತದೆ. ಜನದಟ್ಟಣೆ, ವಾಹನದಟ್ಟಣೆ ಹಾಗೂ ಕಿರಿದಾದ ರಸ್ತೆಗಳ ಕಾರಣದಿಂದ ಸಂಚಾರ ದಟ್ಟಣೆಯಾಗುತ್ತಿದೆ. ಇದರಿಂದ ಮಾಲಿನ್ಯ, ಇಂಧನ ವ್ಯಯ ಸೇರಿದಂತೆ ದಿನನಿತ್ಯ ಅನೇಕ ಸಮಸ್ಯೆಗಳು ಎದುರಾಗುತ್ತಿವೆ, ಇದಕ್ಕೆಲ್ಲಾ ಪರಿಹಾರ ಸ್ಥಳಾಂತರ ಮಾಡಬೇಕಾಗಿದೆ. ವ್ಯಾಪಾರಸ್ಥರಿಗೆ ಮಳಿಗೆ ಬಾಡಿಗೆ ಒರೆಯಾಗದಂತೆ ಅನುಕೂಲ ಮಾಡಿ ಕೋಡುತ್ತೇವೆ ಎಂದು ಭರವಸೆ ನೀಡಿದರು.
ಎಪಿಎಂಸಿಯಲ್ಲಿ ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಹಾಗೂ ಇತರೆ ವ್ಯಾಪರಿಗಳಿಗೆ ಎಲ್ಲಿ ಸೂಕ್ತವಾದ ಖಾಲಿ ಜಾಗ ಇದೆಯೋ, ಅದನ್ನು ಗುರುತಿಸಿ ಜಿಲ್ಲಾ ಸಚಿವರ ಗಮನಕ್ಕೆ ತಂದು ಅನುಕೂಲ ಮಾಡಿಕೊಡಲಾಗುವುದು. ಎ.ಪಿ.ಎಂ.ಸಿ ಮಾರ್ಕೇಟ್ ಮಳಿಗೆಗಳು ಬೇಕಾದರೆ ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು. ಹಳೆ ಲೈಸೆನ್ಸ್ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಹಬ್ಬ ಹರಿದಿನಗಳಲ್ಲಿ ವಾಹನ ನಿಲುಗಡೆಗೆ ತುಂಬಾ ಸಮಸ್ಯೆ ಆಗುತ್ತಿದ್ದು ಇದನ್ನು ತಪ್ಪಿಸಲು ಸೊಪ್ಪಿನ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರ್ಕೇಟ್ ಗೆ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹೊಸ ಜಾಗಕ್ಕೆ ಬಂದು ಹೊಂದಿಕೊಳ್ಳುವುದು ಕಷ್ಟವಾದರೂ ನಂತರ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಸ್ಥಳಾಂತರಿಸುವುದರಿಂದ ವಾಹನ ನಿಲುಗಡೆ, ಇತ್ಯಾದಿ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರರಾದ ಚಮನ್ ಸಾಬ್. ಕೆ ಮಾತನಾಡಿ ದಾವಣಗೆರೆ ನಗರದಲ್ಲಿ 6 ಲಕ್ಷ ಜನ, ಮನೆಗೆ ಎರಡು, ಮೂರು ವಾಹನಗಳಿರುವುದರಿಂದ ಮುಂದಿನ ದಿನಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ತುಂಬಾ ತೊಂದರೆಯಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ನಿಲುಗಡಿಗೆ ಸಮಸ್ಯೆಯಾಗದಂತೆ ಎಪಿಎಂಸಿ ಮಾರ್ಕೇಟ್ ಗೆ ಸ್ಥಳಾಂತರಿಸಲಾಗುವುದು. ಇದರಿಂದ ನಗರದ ಸ್ವಚ್ಚತೆ, ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು
ಸಭೆಯಲ್ಲಿ ಉಪ ಮಹಾಪೌರರಾದ ಸೋಗಿ ಶಾಂತಕುಮಾರ್ , ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.