SUDDIKSHANA KANNADA NEWS/ DAVANAGERE/ DATE:16-08-2023
ದಾವಣಗೆರೆ: ಬೆಳಿಗ್ಗೆ 10 ಗಂಟೆಯಾದರೂ ಅಡುಗೆ ಸಿಬ್ಬಂದಿ ಇಲ್ಲ. ವಸತಿ ನಿಲಯ (Hostel) ಪಾಲಕರೂ ಹಾಜರಿಲ್ಲ. ಅಡುಗೆ ಪರಿಕರಗಳು ಸ್ವಚ್ಛತೆಯಿಂದ ಕೂಡಿಲ್ಲ. ಸ್ಯಾನಿಟರಿ ಪ್ಯಾಡ್ ಒಂದು ತಿಂಗಳ ಮಾತ್ರ ವಿತರಿಸಿ ಮತ್ತೆ ನೀಡಿಲ್ಲ. 150 ಮಕ್ಕಳ ಪೈಕಿ 110 ಮಕ್ಕಳು ಮಾತ್ರ ಹಾಜರು. ಊಟ, ತಿಂಡಿಯಲ್ಲಿ ಇಲ್ವೇ ಇಲ್ಲ ರುಚಿ, ಪೌಷ್ಠಿಕತೆ.
ಇದು ನಗರದ ಕುಂದುವಾಡ ರಸ್ತೆಯ ಸರ್ಕಾರಿ ಪೊಸ್ಟ್ ಮೆಟ್ರಕ್ ವಸತಿ ನಿಲಯ(Hostel) ಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ.ಎಂ.ಕೊಳ್ಳ ಅವರು ಭೇಟಿ ಕೊಟ್ಟಾಗ ಕಂಡು ಬಂದ ಚಿತ್ರಣ.
ಬೆಳಿಗ್ಗೆ ಹತ್ತು ಗಂಟೆಗೆ ಅಪರ್ಣಾ ಎಂ. ಕೊಳ್ಳ ಅವರು ಭೇಟಿ ಕೊಟ್ಟರು. ಆಗ 10 ಗಂಟೆಯಾದರೂ ಅಡುಗೆ ಸಿಬ್ಬಂದಿ ಮತ್ತು ನಿಲಯ (Hostel) ಪಾಲಕರು ಹಾಜರಿರಲಿಲ್ಲ. ಅಡುಗೆ ಪರಿಕರಗಳು ಸ್ವಚ್ಚೆತೆಯಿಂದ ಕೂಡಿರಲಿಲ್ಲ. ಸ್ಯಾನಿಟರಿ ಪ್ಯಾಡ್ 1 ತಿಂಗಳು ಮಾತ್ರ ವಿತರಿಸಿ ನಂತರ ವಿತರಣೆ ಮಾಡಿರುವುದಿಲ್ಲ. 150 ಮಕ್ಕಳಲ್ಲಿ 110 ಮಕ್ಕಳ ಮಾತ್ರ ಹಾಜರಿದ್ದರು. ಉಳಿದ ಮಕ್ಕಳ ಬಗ್ಗೆ ಕೇಳಿದರೆ ಸರಿಯಾಗಿ ಉತ್ತರ ಕೊಡುವವರಿಲ್ಲ. ಊಟ ಮತ್ತು ತಿಂಡಿಯಲ್ಲಿ ರುಚಿ ಹಾಗೂ ಪೌಷ್ಠಿಕತೆ ಇಲ್ಲದಿರುವುದು ಕಂಡುಬಂದಿದೆ.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಜಿಲ್ಲೆ ಬರಪೀಡಿತ ಘೋಷಣೆ? ಒಂದು ವಾರದ ಬಳಿಕ ಗೊತ್ತಾಗುತ್ತೆ…!
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್ ಅವರನ್ನು ಅಪರ್ಣಾ ಎಂ. ಕೊಳ್ಳ ಅವರು ಭೇಟಿ ಮಾಡಿ, ನಿಲಯದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸರ್ಕಾರಿ ಬಾಲಕಿಯರ ಬಾಲ ಮಂದಿರ, ಸ್ವಯಂ ಸೇವಾ ಮಕ್ಕಳ ಪಾಲನಾ ಸಂಸ್ಥೆ, ಸರ್ಕಾರಿ ದತ್ತು ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಕ್ ವಸತಿ ನಿಲಯಗಳಿಗೆ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಂವಾದವನ್ನೂ ನಡೆಸಿದರು.
ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯವಹಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆಯಲ್ಲಿ 30 ಅಪೌಷ್ಠಿಕ ಮಕ್ಕಳಿಗೆ ಮಾತ್ರ ಹಾಸಿಗೆ ವ್ಯವಸ್ಥೆ ಇದ್ದು, ಹೆಚ್ಚುವರಿ ಹಾಸಿಗೆ, ಕೊಠಡಿ ಮತ್ತು ಸಿಬ್ಬಂದಿ ತೆಗೆದುಕೊಳ್ಳಲು ಸೂಚಿಸಿದರು.